ಮೈಸೂರು

ಚೆಲುವಾಂಬಾ ಆಸ್ಪತ್ರೆಯ ಆವರಣದಲ್ಲಿ ಇನ್ನು ಮುಂದೆ ಸಂಘಸಂಸ್ಥೆಗಳು ಅಲ್ಲಿನ ರೋಗಿಗಳಿಗೆ ಆಹಾರ ಪದಾರ್ಥಗಳನ್ನು ನೀಡುವಂತಿಲ್ಲ!

ಮೈಸೂರು,ಸೆ.4:- ಚೆಲುವಾಂಬಾ ಆಸ್ಪತ್ರೆಯ ಆವರಣದಲ್ಲಿ ಇನ್ನು ಮುಂದೆ ಯಾವುದೇ ಆಹಾರ ಪದಾರ್ಥಗಳನ್ನು ಸಂಘಸಂಸ್ಥೆಗಳು ಅಲ್ಲಿನ ರೋಗಿಗಳಿಗೆ ನೀಡುವಂತಿಲ್ಲ. ನೀಡಲೇ ಬೇಕು ಅನ್ನುವುದಿದ್ದಲ್ಲಿ ಸ್ಥಾನೀಯ ವೈದ್ಯಾಧಿಕಾರಿಗಳ ಅನುಮತಿ ಪಡೆಯಲೇಬೇಕು. ಅನುಮತಿ ಪಡೆಯದೇ ಹಂಚಿದಲ್ಲಿ ಸಿಕ್ಕಿ ಹಾಕಿಕೊಳ್ಳೋದು ಗ್ಯಾರಂಟಿ.

ಹಲವು ಸಂಘಸಂಸ್ಥೆಗಳವರು ಚೆಲುವಾಂಬಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ ಚಪಾತಿ, ಇಡ್ಲಿ ಸೇರಿದಂತೆ ಹಲವು ಆಹಾರಗಳನ್ನು ನೀಡುತ್ತಿದ್ದರು. ಇದೀಗ ಚೆಲುವಾಂಬಾ ಆಸ್ಪತ್ರೆಯ ಆವರಣದಲ್ಲಿಯೇ ಇಂದಿರಾ ಕ್ಯಾಂಟೀನ್ ಕೂಡ ಆಗಿದ್ದು, ಅಲ್ಲಿಗೆ ರೋಗಿಗಳು ಹೋಗುವುದು ಕಡಿಮೆಯೇ ಎನ್ನಲಾಗಿತ್ತು. ಸಂಘಸಂಸ್ಥೆಗಳವರು ನೀಡುವ ಆಹಾರವನ್ನು ರೋಗಿಗಳು ಸೇವಿಸಬಾರದು ಎನ್ನುವ ಉದ್ದೇಶದಿಂದ ಇದೀಗ ಚೆಲುವಾಂಬಾ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕರು ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಷಯ ಜೋಳಿಗೆಯವರು ಆಸ್ಪತ್ರೆಯ ಆವರಣದಲ್ಲಿ ಊಟವನ್ನು ಹಂಚುತ್ತಿದ್ದರು. ಈ ವಿಷಯವಾಗಿ ಆಸ್ಪತ್ರೆಯ ಆವರಣದಲ್ಲಿ ಊಟವನ್ನು ಹಂಚಬೇಡಿ ಎಂದು ಭದ್ರತಾ ಸಿಬ್ಬಂದಿಗಳು, ಹಿರಿಯ ಶುಶ್ರೂಷಕಿ ಹಾಗೂ ಆಡಳಿತಾಧಿಕಾರಿಗಳು ತಿಳಿಸಿದರೂ ಸಹ ಊಟವನ್ನು ಹಂಚಿರುತ್ತಾರೆ. ಈ ಊಟವನ್ನು ಸೇವಿಸಿದ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಏನಾದರೂ ತೊಂದರೆಯಾದಲ್ಲಿ ನಾವು ಜವಾಬ್ದಾರರಾಗಬೇಕಾಗುತ್ತದೆ. ಇದರ ಬಗ್ಗೆ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.  ಅಷ್ಟೇ ಅಲ್ಲದೇ ಆವರಣದಲ್ಲಿ ಫಲಕವನ್ನು ಅಳವಡಿಸಲಾಗಿದ್ದು, ಅದರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಸೆಕ್ಷನ್-63 ಪ್ರಕಾರ ಸಾರ್ವಜನಿಕ ಹಿತ ದೃಷ್ಟಿಯಿಂದ ಆಸ್ಪತ್ರೆಯ ಆವರಣ ಮತ್ತು ಮುಂಭಾಗದಲ್ಲಿ ಯಾವುದೇ ರೀತಿಯ ಊಟ-ತಿಂಡಿ ಮತ್ತು ಆಹಾರ ಪದಾರ್ಥಗಳ ವಿತರಣೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮೇಲ್ಕಂಡ ಆದೇಶವನ್ನು ಮೀರಿ ಆಹಾರ ಪದಾರ್ಥಗಳನ್ನು ವಿತರಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ವೈದ್ಯಕೀಯ ಅಧೀಕ್ಷಕರು ಎಂದು ನಮೂದಿಸಲಾಗಿದೆ.

ಆಸ್ಪತ್ರೆಗೆ ಪ್ರವೇಶಕ್ಕೂ ಮುನ್ನ ಇದೀಗ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು, ಸಿಬ್ಬಂದಿಯನ್ನು ನೇಮಿಸಲಾಗಿದೆ. ಸಿಬ್ಬಂದಿ ಕೂಲಂಕುಷವಾಗಿ ಪರಿಶೀಲಿಸಿ ಮಾಹಿತಿ ಪಡೆದು ಒಳಗಡೆ ಬಿಡುತ್ತಾನೆ.

ಈ ಕುರಿತು ಅಲ್ಲಿನ ಹಿರಿಯ ಶುಶ್ರೂಷಕಿ ಪಾರ್ವತಮ್ಮನವರನ್ನು ಪ್ರಶ್ನಿಸಿದಾಗ ಮೇಲಧಿಕಾರಿಗಳಿಂದ ಆದೇಶ ಬಂದಿದೆ ಎಂದಿದ್ದಾರೆ. ಅದರಂತೆ ನಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಆದರೆ ಸಾರ್ವಜನಿಕರು ಹೀಗ್ಯಾಕೆ ಮಾಡಿದರೋ ಗೊತ್ತಿಲ್ಲ. ನಮಗೆ ಅಲ್ಲಿ ಹಣ ಕೊಟ್ಟು ಊಟ ಪಡೆಯುವುದು ಅಂದರೆ ಕಷ್ಟ. ಸಂಘಸಂಸ್ಥೆಗಳವರು ಚೆನ್ನಾಗಿರುವ ಊಟವನ್ನೇ ಕೊಡುತ್ತಿದ್ದರು. ಇಂದಿರಾ ಕ್ಯಾಂಟೀನ್ ಗೆ ಹೋಗಲು ತಿಳಿಸುತ್ತಾರೆ ಎಂದು ಅಳಲನ್ನು ತೋಡಿಕೊಂಡರು.

ಇಂದಿರಾ ಕ್ಯಾಂಟೀನ್ ಆರಂಭವಾಗಿ ಬಹಳ ದಿನವಾದರೂ ಇಂದಿರಾ ಕ್ಯಾಂಟೀನ್ ಅಲ್ಲಿ ಅಷ್ಟೇನು ಗುರುತಿಸಿಕೊಂಡಿಲ್ಲ. ಇಂದಿರಾ ಕ್ಯಾಂಟೀನ್ ಅಭಿವೃದ್ಧಿಪಡಿಸಲೋಸುಗ ಈ ರೀತಿ ಮಾಡುತ್ತಿದ್ದಾರೇನೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: