ದೇಶ

ಹೈದರಾಬಾದ್ ಅವಳಿ ಸ್ಫೋಟ ಪ್ರಕರಣ: ಇಬ್ಬರು ದೋಷಿ

ನವದೆಹಲಿ,ಸೆ.4-2007 ರಲ್ಲಿ ಹೈದರಾಬಾದ್ ನಲ್ಲಿ ಸಂಭವಿಸಿದ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಇಬ್ಬರನ್ನು ದೋಷಿ ಎಂದು ಘೋಷಿಸಿದ್ದು, ಮೂವರನ್ನು ದೋಷಮುಕ್ತಗೊಳಿಸಿದೆ.

ನೈಖ್ ಶಫೀಕ್ ಸಯೀದ್‌ ಮತ್ತು ಮಹಮ್ಮದ್ ಅಕ್ಬರ್ ಇಸ್ಮಾಯಿಲ್ ಚೌಧರಿ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಫಾರೂಕ್​ ಶಾಫುದ್ದೀನ್​ ತಾರಕ್ಷ್​, ಮೊಹಮ್ಮದ್​ ಸಾದಿಕ್​ ಇಸ್ರಾರ್​ ಅಹಮದ್ ಶೇಖ್ ಮತ್ತು ತಾರಿಕ್​ ಅಂಜುಂ ಅವರನ್ನು ಖುಲಾಸೆಗೊಳಿಸಿದೆ.

2007 ರಲ್ಲಿ ಹೈದರಾಬಾದ್ ನ ಗೋಕುಲ್ ಚಾಟ್ ಮತ್ತು ಲುಂಬಿನಿ ಪಾರ್ಕ್ ನಲ್ಲಿ ಅವಳಿ ಸ್ಫೋಟ ಸಂಭವಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸ್‌ನ ಗುಪ್ತಚರ ಇಲಾಖೆ ತನಿಖೆ ನಡೆಸಿದ್ದು, ಇಂಡಿಯನ್ ಮುಜಾಹಿದೀನ್‌ ಸದಸ್ಯರೆನ್ನಲಾದ ಐವರು ಆರೋಪಿಗಳನ್ನು ಬಂಧಿಸಿತ್ತು. ಅವರ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿತ್ತು. ತಲೆಮರೆಸಿಕೊಂಡಿರುವ ರಿಯಾಜ್ ಭಟ್ಕಳ್‌ ಮತ್ತು ಇಕ್ಬಾಲ್ ಭಟ್ಕಳ್‌ ವಿರುದ್ಧವೂ ಆರೋಪ ದಾಖಲಿಸಲಾಗಿತ್ತು.

ಐವರು ಆರೋಪಿಗಳ ವಿಚಾರಣೆಯನ್ನು ಚೆರ್ಲಪಲ್ಲಿ ಸೆಂಟ್ರಲ್ ಜೈಲಿನಿಂದ ನಾಂಪಲ್ಲಿ ಕೋರ್ಟ್‌ ಆವರಣಕ್ಕೆ ಜೂನ್‌ನಲ್ಲಿ ವರ್ಗಾಯಿಸಲಾಗಿತ್ತು.

ನಗರದ ಜನಪ್ರಿಯ ಉಪಾಹಾರ ತಾಣ ಗೋಕುಲ್ ಚಾಟ್‌ ಬಳಿ ಸಂಭವಿಸಿದ್ದ ಸ್ಫೋಟದಲ್ಲಿ 32 ಮಂದಿ ಮೃತಪಟ್ಟು, 47 ಮಂದಿ ಗಾಯಗೊಂಡಿದ್ದರು. ಅದೇ ರೀತಿ ಲುಂಬಿನಿ ಪಾರ್ಕ್‌ ಥಿಯೇಟರ್ ಬಳಿ ನಡೆದ ಸ್ಫೋಟದಲ್ಲಿ 12 ಮಂದಿ ಬಲಿಯಾಗಿ 21 ಮಂದಿ ಗಾಯಗೊಂಡಿದ್ದರು. (ಎಂ.ಎನ್)

 

Leave a Reply

comments

Related Articles

error: