
ಮೈಸೂರು
ಕೃಷ್ಣ, ರಾಧೆ ವೇಷಧಾರಿಯಾಗಿ ಕಣ್ಮನ ಸೆಳೆದ ಗಂಗೋತ್ರಿ ಪಬ್ಲಿಕ್ ಶಾಲಾ ಮಕ್ಕಳು
ಮೈಸೂರು, ಸೆ.4:- ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಸ್ಕೂಲ್ನಲ್ಲಿ ಇತ್ತೀಚೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಶ್ರೀ ಕೃಷ್ಣನ ವಿಗ್ರಹಕ್ಕೆ ಶಾಲಾ ಸಂಯೋಜನಾಧಿಕಾರಿಗಳಾದ ಕಾಂತಿನಾಯಕ್, ಮುಖ್ಯೋಪಾಧ್ಯಾಯಿನಿ ಝರೀನಾ ಬಾಬುಲ್, ಶಾಲಾ ಶಿಕ್ಷಕರು ಮತ್ತು ಮಕ್ಕಳು ಶ್ರದ್ಧಾಭಕ್ತಿಯಿಂದ ಪೂಜೆಯನ್ನು ನೆರವೇರಿಸಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಕೃಷ್ಣ ರಾಧೆಯ ರೀತಿ ಸಾಂಪ್ರದಾಯಿಕ ಉಡುಪನ್ನು ಧರಿಸಿದರು. ತರಗತಿವಾರು ಮಕ್ಕಳು ಮತ್ತು ಶಿಕ್ಷಕರು ಹಾಡು ಮತ್ತು ನೃತ್ಯವನ್ನು ಪ್ರದರ್ಶಿಸಿದರು.
ಪ್ರಿ.ಕೆಜಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆಯನ್ನು ನಡೆಸಲಾಯಿತು. ಒಂದೊಂದು ಮಕ್ಕಳು ಒಂದೊಂದು ಭಂಗಿಯ ಕೃಷ್ಣ ಮತ್ತು ರಾಧೆಯರ ಉಡುಪುಗಳನ್ನು ಧರಿಸಿ ಎಲ್ಲರನ್ನೂ ಆಕರ್ಷಿಸಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಪೋಷಕರು ಕೂಡ ಭಾಗವಹಿಸಿದ್ದರು. ಪ್ರೌಢಶಾಲಾ ಮಕ್ಕಳಿಗೆ ಮಡಿಕೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಿ ಮೊಸರು ಕುಡಿಕೆಯ ಮಹತ್ವ ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ಕುಣಿದು ಕುಪ್ಪಳಿಸಿದರು.
ಅಲ್ಲಿ ಯಶೋಧಾ ಕೃಷ್ಣ, ಬಾಲಕೃಷ್ಣ, ಗೋಪಾಲಕೃಷ್ಣ ಎಲ್ಲರೂ ತಮ್ಮ ಬಾಲಲೀಲೆಗಳನ್ನು ತೋರುತ್ತಿದ್ದರು. ಶ್ರೀ ಕೃಷ್ಣ ವೇಷಧಾರಿ ಪುಟಾಣಿಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಚಿಕ್ಕ ಮಕ್ಕಳು ಆಡುವ ತುಂಟಾಟ ಎಲ್ಲರನ್ನೂ ಮುದಗೊಳಿಸುತ್ತದೆ. ಅದರಲ್ಲೂ ಚಿಣ್ಣರು ಕೃಷ್ಣನ ವೇಷದಲ್ಲಿ ಕಂಗೊಳಿಸಿದರೆ ತಾಯಂದಿರ ಹಾಗೂ ಶಿಕ್ಷಕರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಕೃಷ್ಣ ಜನ್ಮಾಷ್ಟಮಿಗೆ ಒಂದು ದಿನ ಮೊದಲೇ ಪೋಷಕರು ತಮ್ಮ ಕಂದಮ್ಮಗಳನ್ನು ಕೃಷ್ಣನ ವೇಷಧಾರಿಗಳಾಗಿ ಸಿದ್ಧಪಡಿಸಿ ಕಾರ್ಯಕ್ರಮದಲ್ಲಿ ನೆರೆದಿದ್ದ ಶಾಲೆಯ ಸಿಬ್ಬಂದಿಗಳಿಗೆ, ಪ್ರೇಕ್ಷಕರಿಗೆ ಮುದ ನೀಡಿದರು.
ವಿದ್ಯಾರ್ಥಿನಿಗಳಾದ ಮೌನ ಮತ್ತು ಮೋನಿಕ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು. (ಜಿ.ಕೆ,ಎಸ್.ಎಚ್)