ಪ್ರಮುಖ ಸುದ್ದಿ

ಎಸ್ಪಿಯಾಗಿರುವ ಮಗಳಿಗೆ ಸೆಲ್ಯೂಟ್ ಹೊಡೆದು ಆದೇಶ ಪಾಲಿಸಿದ ಡಿಸಿಪಿ ತಂದೆ !

ದೇಶ(ತೆಲಂಗಾಣ)ಸೆ.4:- ತಂದೆಯ ಕೈ ಬೆರಳುಗಳನ್ನು ಹಿಡಿದು ಹೆಜ್ಜೆ ಹಾಕಿದ ಮಗಳು ಇಂದು ತಂದೆಗೇ ಆದೇಶ ನೀಡುವಂತಾದರೆ,  ಆ ಹಿರಿಯ ಜೀವ ಮಗಳಿಗೆ ಸೆಲ್ಯೂಟ್ ಹೊಡೆಯುವಂತಾದರೆ  ತಂದೆಯ ಮನಕ್ಕೆಷ್ಟು ಸಂತೋಷವಾಗಬೇಡ. ಇಷ್ಟು ದಿನ ಇಂಥಹ ದೃಶ್ಯಗಳನ್ನು ಕೇವಲ ಸಿನಿಮಾಗಳಲ್ಲಿ ನೋಡಿದ್ದೆವು. ಆದರೆ ಇಂತಹ ಅಪರೂಪದ  ದೃಶ್ಯ  ಹೈದ್ರಾಬಾದ್ ನಲ್ಲಿ ನಡೆದಿದೆಯಂತೆ.

ಪೊಲೀಸ್ ಉಪ ಆಯುಕ್ತ  ಉಮಾಮಹೇಶ್ವರ್ ಶರ್ಮಾ, ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ತನ್ನ ಮಗಳು ಸಿಂಧುಗೆ ಸೆಲ್ಯೂಟ್ ಹೊಡೆದಿದ್ದಾರೆ. ಸಿಂಧೂ ತೆಲಂಗಾಣದ ಜಗತಿಯಾಲ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು, ಉಮಾಮಹೇಶ್ವರ್ ಹೈದ್ರಾಬಾದ್ ನ ಮಲಕಾಜಗಿರಿಯಲ್ಲಿ ಪೊಲಿಸ್ ಉಪಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರವಿವಾರ ಹೈದ್ರಾಬಾದ್ ನ ಕೊಂಗಾರ ಕ್ಲಾನ್ ಹೊರವಲಯದಲ್ಲಿರುವ ತೆಲಂಗಾಣ ರಾಷ್ಟ್ರೀಯ ಸಮಿತಿಯ ಸಾರ್ವಜನಿಕ ಸಭೆಗೆ ಕರ್ತವ್ಯದ ಮೇಲೆ ಹಾಜರಾಗಿದ್ದ ತಂದೆ-ಮಗಳಿಬ್ಬರ ಮುಖಾಮುಖಿಯಾಗಿದ್ದು, ತಂದೆ ಮಗಳಿಗೆ ಸೆಲ್ಯೂಟ್ ಹೊಡೆದಿದ್ದಾರೆ. ‘ಇದೇ ಮೊದಲ ಬಾರಿಗೆ ಕರ್ತವ್ಯದ ಮೇಲೆ ನಾವಿಬ್ಬರು ಪರಸ್ಪರ ಮುಖಾಮುಖಿಯಾಗಿದ್ದೇವೆ. ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ನಾನು ನಿಜಕ್ಕೂ ಸೌಭಾಗ್ಯಶಾಲಿ’  ಅವರು ನನ್ನ ಹಿರಿಯ ಅಧಿಕಾರಿ. ನಾನವರನ್ನು ನೋಡಿದಾಗ ಅವರಿಗೆ ವಂದಿಸುತ್ತೇನೆ. ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಲಾಖೆಯ ಕುರಿತು ಚರ್ಚಿಸುವುದಿಲ್ಲ. ಮನೆಯಲ್ಲಿ ತಂದೆ ಮಗಳು ಯಾವ ರೀತಿ ಇರುತ್ತಾರೋ ಅದೇ ರೀತಿ ಇರುತ್ತೇವೆ’  ಎಂದಿದ್ದಾರಂತೆ ಉಮಾಮಹೇಶ್ವರ ಶರ್ಮಾ.

ನನಗೂ ಕೂಡ ತಂದೆಯ ಜೊತೆ ಕರ್ತವ್ಯ ನಿರ್ವಹಿಸುತ್ತಿರುವುದು ಸಾಕಷ್ಟು ಖುಷಿ ನೀಡಿದೆ ಎಂದಿದ್ದಾರಂತೆ ಸಿಂಧು. ಇದೀಗ ತಂದೆ ಮಗಳ ಆದೇಶವನ್ನು ಎದೆಯುಬ್ಬಿಸಿ ಪಾಲಿಸಿದ ವಿಡಿಯೋ ಸಾಕಷ್ಟು ವೈರಲ್ ಆಗಿದೆಯಂತೆ. (ಎಸ್.ಎಚ್)

Leave a Reply

comments

Related Articles

error: