ಕರ್ನಾಟಕ

ಡೆಂಗ್ಯೂ ನಿಯಂತ್ರಣ ಮುಂಜಾಗ್ರತೆ : ಹಾಸನದಲ್ಲಿ ಲಾರ್ವ ಸಮೀಕ್ಷೆ

ಹಾಸನ (ಸೆ.3): ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಹಾಸನ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ, ಹಾಗೂ ನಗರಸಭೆ, ಹಾಸನ ವತಿಯಿಂದ ಹಾಸನ ನಗರದಾದ್ಯಂತ ಡೆಂಗ್ಯೂ ನಿಯಂತ್ರಣ ಸಲುವಾಗಿ ಹಮ್ಮಿಕೊಂಡಿರುವ ಸಾಮೂಹಿಕ ಈಡಿಸ್ ಲಾರ್ವ ಸಮೀಕ್ಷೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಸತೀಶ್ ಕುಮಾರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಾ.ರಾಜ್‍ಗೋಪಾಲ್ ಎನ್ ಎನ್, ಜಿಲ್ಲಾ ಮಲೇರಿಯಾ ಅಧಿಕಾರಿಗಳು, ಹಾಸನ ತಾಲೂಕಿನ ಆರೋಗ್ಯಾಧಿಕಾರಿಗಳಾದ ಡಾ. ಸಂತೋಷ್, ಕೀಟಶಾಸ್ತ್ರಜ್ಞರಾದ ರಾಜೇಶ್ ಕುಲಕರ್ಣಿ, ಶಿವಣ್ಣ- ಆರೋಗ್ಯ ಮೇಲ್ವಿಚಾರಕರು, ಹಾಗೂ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಈ ಸಂದರ್ಭದಲ್ಲಿ ಹಾಸನದ ಆರೋಗ್ಯ ಇಲಾಖೆಯ ವತಿಯಿಂದ 29 ಮೇಲ್ವಿಚಾರಕರು, 86 ಕಿರಿಯ ಆರೋಗ್ಯ ಸಹಾಯಕರು, 214 ಆಶಾ ಕಾರ್ಯಕರ್ತೆಯರ ಮುಖಾಂತರ 150 ತಂಡಗಳನ್ನು ರಚಿಸಲಾಗಿದ್ದು ನಗರದ ಎಲ್ಲಾ ಪ್ರದೇಶಗಳಲ್ಲಿ ದಿನಾಂಕ 03-09-2018 ರಿಂದ 05-09-2018 ರ ಮೂರು ದಿನಗಳಂದು ಈ ಸರ್ವೆ ಹಮ್ಮಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ 11 ವಾಹನಗಳನ್ನು ವಿನಿಯೋಗಿಸಲಾಗುತ್ತಿದೆ. ಸದರಿ ಸರ್ವೆಗೆ ನಗರಸಭೆ, ಹಾಸನ ದಿಂದ ಅನುದಾನದ ಸಹಕಾರ ಪಡೆಯಲಾಗಿದೆ.

ಲಾರ್ವಾ ಸಮೀಕ್ಷೆ ವೇಳೆ ಕಾರ್ಯಕರ್ತರು ಪ್ರತಿ ಮನೆ ಮನೆ ಭೇಟಿ ನೀಡಿ, ಸಾರ್ವಜನಿಕರಿಗೆ ಡೆಂಗ್ಯೂ ನಿಯಂತ್ರಣ ಮತ್ತು ಸೊಳ್ಳೆಗಳ ನಾಶ ಕುರಿತು ಆರೋಗ್ಯ ಶಿಕ್ಷಣ ನೀಡುತ್ತಾರೆ. ಪ್ರತಿ ಮನೆಗೆ ಭೇಟಿ ನೀಡಿದಾಗ ಟಾರ್ಚ್ ಬಳಸಿ ಅವರ ಮನೆಗಳಲ್ಲಿ ಸಂಗ್ರಹಸಿಟ್ಟ ನೀರಿನ ಸಂಗ್ರಹಣೆಗಳಲ್ಲಿ ಲಾರ್ವ ಪತ್ತೆ ಮಾಡಿ ನಮೂನೆಗಳಲ್ಲಿ ಭರ್ತಿ ಮಾಡಿ ವರದಿ ಮಾಡುತ್ತಾರೆ. ಆಯಾ ಮನೆಗಳ ಮುಂದೆ ಸ್ಟಿಕ್ಕರ್ ಅಂಟಿಸಿ ಪ್ರತಿ ಮನೆಗೂ ಡೆಂಗ್ಯೂ ಕುರಿತ ಕರಪತ್ರ ವಿತರಿಸಲಿದ್ದಾರೆ. ಅವಶ್ಯವಿದ್ದಲ್ಲಿ ಲಾರ್ವಾನಾಶಕವಾದ ಟೆಮಿಫಾಸ್ ಬಳಸಿ ಲಾರ್ವ ನಾಶ ಪಡಿಸಲಾಗುತ್ತದೆ.

ಆದ್ದರಿಂದ ಸಾರ್ವಜನಿಕರು ಈ ಸರ್ವೆಯಲ್ಲಿ ಸಹಕರಿಸಬೇಕೆಂದು ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.(ಎನ್.ಬಿ)

Leave a Reply

comments

Related Articles

error: