ಕರ್ನಾಟಕ

ಮರಗಳೇ ಮನುಷ್ಯನ ಜೀವನಾಧಾರ, ಮರ ಬೆಳೆಸಿ ಜೀವನ ಉಳಿಸಿಕೊಳ್ಳಿ : ಡಾ.ವಿನಯ್ ಕುಮಾರ್

ಹಾಸನ (ಸೆ.4): ಮನುಷ್ಯನಿಗೆ ಬದುಕಲು ಬೇಕಾದ ಮೂಲಭೂತ ಸೌಕರ್ಯಗಳೆಲ್ಲವು ಮರಗಳಿಂದ ದೊರೆಯುವುದರಿಂದ, ಎಲ್ಲರೂ ಮರಗಳನ್ನು ಬೆಳೆಸಿ, ರಕ್ಷಿಸಿ ಪ್ರಕೃತಿಯ ಸಮತೋಲವನ್ನು ಕಾಪಾಡಿ ಎಂದು ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕರಾದ ಡಾ.ವಿನಯ್ ಕುಮಾರ್ ಆರ್ ತಿಳಿಸಿದರು.

ಕೃಷಿ ಮಹಾವಿದ್ಯಾಲಯ ಹಾಸನದ ಅಂತಿಮ ಬಿ.ಎಸ್.ಸಿ. ಕೃಷಿ ವಿದ್ಯಾರ್ಥಿಗಳು ಹಾಸನ ತಾಲ್ಲೂಕಿನ ಡಣಾಯಕನಹಳ್ಳಿಯಲ್ಲಿ ನಡೆಯುತ್ತಿರುವ “ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ”ದ ಅಂಗವಾಗಿ “ವನಮಹೋತ್ಸವ” ಪ್ರಾತ್ಯಕಿಕೆ ಕಾರ್ಯಕ್ರಮವದಲ್ಲಿ ಡಾ.ವಿನಯ್‍ಕುಮಾರ್‍ಅವರು ಮಾತನಾಡಿ, ಆರೋಗ್ಯವಂತ ಹಾಗೂ ಪ್ರಕೃತಿ ಸಮತೋಲನವಿರುವ ದೇಶದಲ್ಲಿ ಶೇ.33ರಷ್ಟು ಅರಣ್ಯ ಪ್ರದೇಶವಿರಬೇಕು. ಪ್ರಸ್ತುತ ಭಾರತದಲ್ಲಿ ಶೇ.20ರಷ್ಟು ಅರಣ್ಯ ಪ್ರದೇಶವಿದೆ. ಆದ್ದರಿಂದ ಪ್ರಕೃತಿಯಲ್ಲಿ ಅಸಮತೋಲನವುಂಟಾಗಿ ಅತಿವೃಷ್ಟಿ, ಅನಾವೃಷ್ಟಿಯಿಂದ ಜನತತ್ತರಿಸಿ ಹೋಗುತ್ತಿದ್ದಾರೆ.

ಹೀಗಾಗಿ ಭಾರತ ಸರ್ಕಾರವು ವನಮಹೋತ್ಸವವನ್ನು ಆಚರಿಸುವುದರ ಮೂಲಕ ಭಾರತದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸುತ್ತಿದ್ದಾರೆ. ಅಸ್ಸಾಂ ರಾಜ್ಯದಲ್ಲಿ ವನಮೋತ್ಸವದಲ್ಲಿ 75 ಲಕ್ಷ ಸಸಿಗಳನ್ನು ನೆಟ್ಟು ಅರಣ್ಯ ಪ್ರದೇಶವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಡಾ.ವಿನಯ್ ಕುಮಾರ್ ತಿಳಿಸಿದ್ದಾರೆ.

ಪ್ರಕೃತಿಯಲ್ಲಿ ಸಮತೋಲನವನ್ನು ಕಾಪಾಡಲು ಹೆಚ್ಚು ಸಸಿಗಳನ್ನು ನೆಡುವ ಸಲುವಾಗಿ ಡಣಾಯಕನಹಳ್ಳಿಯ ಕಿರಿಯಪ್ರಾಥಮಿಕಶಾಲೆಯ ಮುಂದೆ ಸಿಮರೂಬ, ಹಿಪ್ಪೆ, ಗಸಗಸೆ ಸಸಿಗಳನ್ನು ಊರಿನ ಗ್ರಾಮಸ್ಥರನ್ನೊಳಗೊಂಡು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜೈವಿಕ ಇಂಧನ ಗಿಡಗಳ ಮಹತ್ವ ಹಾಗೂ ಉಪಯೋಗಗಳನ್ನು ರೈತರಿಗೆ ಹೇಳಲಾಯಿತು. ಅರಣ್ಯ ಮರಗಳನ್ನು ಕೃಷಿಯ ಜೊತೆ ಅಂತರ ಬೆಳೆಯಾಗಿ ಬದುಗಳ ಮೇಲೆನೆಟ್ಟು ಮಣ್ಣಿನ ಸವಕಳಿಯನ್ನು ತಡೆದು, ಮರಗಳ ಸೊಪ್ಪುಗಳನ್ನು ಗೊಬ್ಬರ ತಯಾರಿಕೆಯಲ್ಲಿ ಹಾಗೂ ಕುರಿಮೇಕೆ ಸಾಕಾಣಿಕೆಯಲ್ಲಿ ಬಳಸುವುದು ಅತಿಸೂಕ್ತ ಎಂದು ರೈತರಿಗೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಎಲ್ಲಾ ರೈತರಿಗೂ ಜೈವಿಕ ಇಂಧನ ಮರಗಳ ಸಸಿಗಳನ್ನು ಕೊಟ್ಟು, ನಡುವ ಹಾಗೂ ಬೆಳೆಸುವ ವಿಧಾನವನ್ನುತಿಳಿಸಿದರು. ರೈತರಿಗೆ ಮರದಿಂದ ಬರುವ ಬೀಜವನ್ನು ಸಂಗ್ರಹಿಸಿ ಎಣ್ಣೆತೆಗೆದು ಅದನ್ನು ವಾಹನಗಳಿಗೆ ಇಂಧನವಾಗಿ ಬಳಸಬಹುದು ಎಂದು ತಿಳಿಸಲಾಯಿತು.

ಈ ವನ ಮಹೋತ್ಸವ ಕಾರ್ಯಕ್ರಮಕ್ಕೆ ಕೃಷಿಮಹಾವಿದ್ಯಾಲಯ ಕಾರೇಕೆರೆ ಹಾಸನದ, ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಪ್ರಮೋದ್ಜಿ., ಅರ್ಥ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಶಶಿಕಿರಣ್, ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: