ಕರ್ನಾಟಕಪ್ರಮುಖ ಸುದ್ದಿಮೈಸೂರು

66/11 ಕೆವಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಮೈಸೂರು ನಗರ ವಿಶ್ವವಿದ್ಯಾನಿಲಯದ ಸರಹದ್ದಿನ ಕುಕ್ಕರಹಳ್ಳಿ ಕೆರೆ ಧೋಬಿಘಾಟ್ ಮುಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾಗುವ 66/11 ಕೆವಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪ ಕೇಂದ್ರದ ಶಂಕುಸ್ಥಾಪನೆಯನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಈ ಉಪಕೇಂದ್ರದ ಯೋಜನಾ ವೆಚ್ಚ 35.21 ಕೋಟಿ ರೂ. ಆಗಿದ್ದು, ಇದರಿಂದ ವಾರ್ಷಿಕ 4.38 ಲಕ್ಷ ಯೂನಿಟ್ ಹಾಗೂ ರೂ. 25.88 ಲಕ್ಷ ಉಳಿತಾಯವಾಗಲಿದೆ. ಧೋಬಿ ಘಾಟಿನ ಸರಹದ್ದಿನಲ್ಲಿರುವ ಡಿ.ಸಿ. ಕಚೇರಿ, ಸರಸ್ವತಿಪುರಂ, ಜಿಲ್ಲಾ ಪಂಚಾಯಿತಿ ಕಚೇರಿ, ಕಲಾಮಂದಿರ, ಕೋರ್ಟ್ ಸಂಕೀರ್ಣ, ಮಾನಸ ಗಂಗೋತ್ರಿ ಆವರಣ, ಕುವೆಂಪುನಗರದ ಕೆಲವು ಭಾಗಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು. ವಿದ್ಯುತ್ ಅಡಚಣೆಗಳು ಕಡಿಮೆಯಾಗುವುದರ ಜೊತೆಗೆ ವೋಲ್ಟೇಜ್ ಸುಧಾರಣೆ  ಸಹ ಆಗಲಿದೆ ಎಂದರು.
ಧೋಬಿ ಘಾಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿಜಯನಗರ, ಬೋಗಾದಿ, ಎಫ್‍ಟಿಎಸ್ ಹಾಗೂ ಡಿ.ಕೆ.ಮೈದಾನ ವಿದ್ಯುತ್ ಉಪಕೇಂದ್ರಗಳಿಂದ ವಿದ್ಯುತ್ ಪೂರೈಸುತ್ತಿದ್ದು, ವಿದ್ಯುತ್ ಅಡಚಣೆಗಳು ಹಾಗೂ ವೋಲ್ಟೇಜ್ ವ್ಯತ್ಯಯವಾಗುತ್ತಿದ್ದು, ಈ ಹೊಸ ಉಪಕೇಂದ್ರದ ಸ್ಥಾಪನೆಯಿಂದ ತೊಂದರೆಗಳು ನಿವಾರಣೆಯಾಗುತ್ತದೆ ಎಂದರು.
ಇದೇ ರೀತಿ ಮೈಸೂರಿನ 3 ವಿವಿಧ ಭಾಗಗಳಲ್ಲಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪಿಸುವುದರಿಂದ ವಿದ್ಯುತ್ ಸಮಸ್ಯೆಯನ್ನು ನಿವಾರಿಸಬಹುದಾಗಿದ್ದು, ಹೊಸ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಮೈಸೂರು ಜಿಲ್ಲೆಯ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಚಿಂತಿಸಲಾಗುವುದು ಎಂದರು. ಇದೇವೇಳೆ  ನೀರಿನ ಕುರಿತು ಮಾತನಾಡಿದ ಸಿಎಂ 15ಟಿಎಂಸಿ ನೀರು ಇದೀಗ ಉಳಿದಿದ್ದು ಇದನ್ನ ಜೂನ್ ತಿಂಗಳ ವರೆಗೂ ಜನರಿಗೆ ಕೊರತೆಯಾಗದಂತೆ ಸದ್ಬಳಕೆ ಮಾಡುತ್ತೇವೆ ಈ ಬಗ್ಗೆ ಚಿಂತೆ ಬೇಡವೆಂದು ಜನರಿಗೆ ಭರವಸೆ ನೀಡಿದರು.  ಮೋದಿ ಅವರು ನೋಟ್ ಬ್ಯಾನ್ ಮಾಡಿ ಬಡವರ ಹಾಗೂ ಮಧ್ಯಮ ವರ್ಗದವರ ನಿದ್ದೆಗೆಡುವಂತೆ ಮಾಡಿದ್ದಾರೆ ಎಂದು ಮೋದಿ ಅವರಿಗೆ ಟಾಂಗ್ ನೀಡಿದರು. ಇದು ಅಫೆನ್ಸ್ ಕಾನೂನು ಬಾಹಿರ ಕ್ರಿಮಿನಲ್ ಪ್ರಕರಣ ಎಂದು ಮೋದಿ ಅವರ ನೋಟ್ ಬ್ಯಾನ್ ಯೋಜನೆಗೆ ಕಿಡಿ ಕಾರಿದರು. ಮೀಟರ್ ಬಡ್ಡಿ, ಚಕ್ರಬಡ್ಡಿ ಪಡೆದರೆ ಅಂತವರಿಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಕಾರ್ಯಕ್ರಮ ದಲ್ಲಿ ಆದೇಶ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ವಾಸು, ಮೈಸೂರು ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಎಂ.ಜೆ. ರವಿಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಹೆಚ್.ಎ. ವೆಂಕಟೇಶ್, ಮಾಜಿ ಮಹಾಪೌರರು ಹಾಲಿ ಸದಸ್ಯ ಆರ್. ಲಿಂಗಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: