ಪ್ರಮುಖ ಸುದ್ದಿ

ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯಿಂದ 650 ಕ್ಕೂ ಅಧಿಕ ಕುಟುಂಬಗಳಿಗೆ ನೆರವಿನ ಹಸ್ತ

ರಾಜ್ಯ(ಮಡಿಕೇರಿ) ಸೆ.4 :- ಪ್ರಕೃತಿ ವಿಕೋಪದಿಂದ ನೆಲೆ ಕಳೆದುಕೊಂಡಿರುವ ಕೊಡಗಿನ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುತ್ತಾ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿರುವ ಜಮಾಅತೆ ಇಸ್ಲಾಮೀ ಹಿಂದ್‍ನ ಸಮಾಜಸೇವಾ ವಿಭಾಗ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ 650 ಕ್ಕೂ ಅಧಿಕ ಕುಟುಂಬಗಳ ನೋವಿಗೆ ಸ್ಪಂದಿಸಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು ಜಿಲ್ಲೆಯಲ್ಲಿ ಅದರಲ್ಲೂ ಮಡಿಕೇರಿ ತಾಲ್ಲೂಕಿನಲ್ಲಿ ಜಲಪ್ರಳಯ ಹಾಗೂ ಭೂಕುಸಿತ ಉಂಟಾಗಿ ಸಾರ್ವಜನಿಕರ ಆಸ್ತಿ-ಪಾಸ್ತಿ ನಾಶವಾಗಿದ್ದು, ಜೀವಹಾನಿಯೂ ಉಂಟಾಗಿದೆ. ಹೆಚ್.ಆರ್.ಎಸ್‍ನ ಕಾರ್ಯಕರ್ತರು ಈಗಾಗಲೇ ಎಲ್ಲಾ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ  ಸಮೀಕ್ಷೆ ನಡೆಸುವ ಮೂಲಕ ನೊಂದವರ  ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ ಎಂದರು.  ಮಡಿಕೇರಿಯ ಕಾರುಣ್ಯ ಸೆಂಟರ್‍ನಲ್ಲಿ ಕೊಡಗು ರಿಲೀಫ್ ಸೆಲ್ ಸ್ಥಾಪಿಸಿ ಪರಿಹಾರ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.

ಪರಿಹಾರ ಕೇಂದ್ರಗಳಿಗೆ ಹೊರತಾಗಿ ಕೆಲಸವಿಲ್ಲದೇ ಕಷ್ಟ ಪಡುವ ಸುಮಾರು 650 ಕುಟುಂಬಗಳಿಗೆ ಆಹಾರ ಪರಿಕರ ವಿತರಿಸಲಾಗಿದೆ. ಪ್ರವಾಹಕ್ಕೆ ತುತ್ತಾದ ಸುಮಾರು 20 ಮನೆಗಳನ್ನು ಶುಚಿಗೊಳಿಸಲಾಗಿದೆ. ಓರ್ವ ವಿಧವಾ ಸಂತ್ರಸ್ತೆಗೆ 1.50ರೂ. ಮೌಲ್ಯದ ಮನೆಯನ್ನು ನಗರದ ತ್ಯಾಗರಾಜ ಬಡಾವಣೆಯಲ್ಲಿ ನೀಡಲಾಗಿದೆ. ಓರ್ವ ವೆಲ್ಡರ್‍ಗೆ ಜೀವನ ನಿರ್ವಹಣೆಗೋಸ್ಕರ ವೆಲ್ಡಿಂಗ್ ಯಂತ್ರವನ್ನು ವಿತರಿಸಲಾಗಿದೆ. ಎರಡು ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ನಡೆಸಲಾಗಿದೆ. ಒಬ್ಬ ಸಂತ್ರಸ್ತನಿಗೆ ಜೀವನ ನಿರ್ವಹಣೆಗಾಗಿ ಆಟೋರಿಕ್ಷಾ ಒಂದನ್ನು ನೀಡಲಾಗಿದೆ.

ಇನ್ನು ಮುಂದೆಯೂ ಹೆಚ್.ಆರ್.ಎಸ್. ನಿಂದ ಸೇವಾ ಕಾರ್ಯಗಳು ಮುಂದುವರಿಯಲಿದೆ ಎಂದು ತಿಳಿಸಿದ ಪ್ರಮುಖರು ಪ್ರವಾಹದ ನಡುವೆ ಸಮಾಜದಲ್ಲಿದ್ದ ಅಸಹಿಷ್ಣುತೆ ಕೊಚ್ಚಿ ಹೋಗಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು. ಸಂಕಷ್ಟದ ಸಂದರ್ಭದಲ್ಲಿ ಜಾತಿ ಭೇದ ಮರೆತು, ಒಬ್ಬರಿಗೊಬ್ಬರು ಸಹಾಯ ಹಸ್ತ ಚಾಚುವ ಮೂಲಕ ಕೋಮು ಸೌಹಾರ್ದತೆಯನ್ನು ಪ್ರದರ್ಶಿಸಿರುವುದು ಮಾನವೀಯತೆಯ ಆಳವನ್ನು ಸಾಕ್ಷೀಕರಿಸಿದೆ ಎಂದು ಅಭಿಪ್ರಾಯಪಟ್ಟರು.

ಈ ಸೌಹಾರ್ದತೆಯ ವಾತಾವರಣ ಎಲ್ಲಾ ಸಂದರ್ಭದಲ್ಲೂ ಪ್ರಜ್ವಲಿಸಬೇಕೆಂದು ಕರೆ ನೀಡಿದರು. ಅತಿವೃಷ್ಟಿ ಹಾನಿ ಪ್ರದೇಶಗಳ ಪರಿಹಾರೋಪಾಯಗಳ ಬಗ್ಗೆ ಜಿಲ್ಲಾಧಿಕಾರಿಗಳಿಗಾಗಿ ಈಗಾಗಲೇ ಮನವಿ ಪತ್ರವನ್ನು ಸಲ್ಲಿಸಲಾಗಿದ್ದು, ಕೆಲವು ಸಲಹೆಗಳನ್ನು ನೀಡಿರುವುದಾಗಿ ಪ್ರಮುಖರು ವಿವರಿಸಿದರು.

ಹಾನಿಗೊಳಗಾಗಿರುವ ಪ್ರಮುಖ ಹೆದ್ದಾರಿಗಳನ್ನು ಶೀಘ್ರ ದುರಸ್ತಿಗೊಳಿಸಿ ಜನರ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಸಂಪಾಜೆಯವರೆಗೆ ಲಘು ವಾಹನ ಸಂಚರಿಸಲು ತಾತ್ಕಾಲಿಕ ರಸ್ತೆಯ ವ್ಯವಸ್ಥೆ ಕಲ್ಪಿಸಬೇಕು.

ನಿರಾಶ್ರಿತರ ಕೇಂದ್ರಗಳಲ್ಲಿರುವವರಿಗೆ ಆಪ್ತ ಸಮಾಲೋಚನೆ ಮೂಲಕ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕು. ಸಂಪೂರ್ಣ ಮನೆ ಕಳೆದುಕೊಂಡವರಿಗೆ ಕನಿಷ್ಟ ಮನೆ ನಿರ್ಮಾಣಕ್ಕೆ ಸೌಕರ್ಯ ಒದಗಿಸಬೇಕು. ಮನೆ ಕಳೆದು ಕೊಂಡವರಿಗೆ ಪುನರ್ವಸತಿ ಕಲ್ಪಿಸುವಾಗ ಆಯಾ ಗ್ರಾಮಗಳನ್ನೇ ಪರಿಗಣಿಸಬೇಕು. ಆಸ್ತಿಯ, ಶಿಕ್ಷಣದ, ಆರ್ಥಿಕ ವ್ಯವಹಾರದ, ಉದ್ಯೋಗದ, ಆರೋಗ್ಯದ ಬಗೆಗಿನ ದಾಖಲಾತಿಗಳನ್ನು ಕಳೆದುಕೊಂಡವರಿಗೆ ಅವನ್ನು ಮರಳಿ ಪಡೆಯುವ ಬಗ್ಗೆ ಮಾಹಿತಿಯನ್ನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸುವುದು ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸುವುದು. ದಾಖಲೆಗಳ ಅಭಾವದಲ್ಲಿ ಸರಕಾರದ ಸೌಲಭ್ಯಗಳನ್ನು ಕೋರುವ ಫಲಾನುಭವಿಗಳಿಗೆ ನಿಬಂಧನೆಗಳನ್ನು ಸಡಿಲಗೊಳಿಸಬೇಕು.

ನಿರಾಶ್ರಿತರ ಕೇಂದ್ರಗಳಿಂದ ಶಿಕ್ಷಣ ಸಂಸ್ಥೆಗಳಿಗೆ ಹೋಗುತ್ತಿರುವ ಮಕ್ಕಳಿಗೆ ಆಪ್ತ ಸಮಾಲೋಚನೆ ಮೂಲಕ ಆತ್ಮಸ್ಥೈರ್ಯ ತುಂಬುವ ಕಾರ್ಯ ಶಾಲಾ-ಕಾಲೇಜುಗಳಲ್ಲಿ ನಡೆಯಬೇಕು. ಸಂತ್ರಸ್ತರ ಮಕ್ಕಳು ವಿದ್ಯಾಭ್ಯಾಸ ಪಡೆಯುವ ವೃತ್ತಿಪರ ಕಾಲೇಜುಗಳೂ ಸೇರಿ ಸಂಬಂಧಪಟ್ಟ ಸಂಸ್ಥೆಗಳಿಗೆ ಶುಲ್ಕ ವಿನಾಯ್ತಿ ಬಗ್ಗೆ ನಿರ್ದೇಶಿಸಬೇಕು. ಎಲ್ಲಾ ಬಗೆಯ ವಿದ್ಯಾರ್ಥಿ ವೇತನಗಳಿಗೆ ವೇತನಗಳಿಗೆ ನಿಗದಿ ಪಡಿಸಿರುವ ಅವಧಿಯನ್ನು ವಿಸ್ತರಣೆಗೊಳಿಸಲು ಸರಕಾರದ ಗಮನಹರಿಸಬೇಕು.

ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮುಂತಾದ ಸಾರ್ವಜನಿಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ನಿರಾಯಾಸವಾಗಿ ಪರೀಕ್ಷೆಗೆ ಕುಳಿತುಕೊಳ್ಳುವಂತೆ ಪರೀಕ್ಷಾ ಮಂಡಳಿಗಳಿಗೆ ತಿಳಿಯಪಡಿಸುವುದು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರ್ಕಡ, ವಲಯ ಮೇಲ್ವಿಚಾರಕ ಯು.ಅಬ್ದುಸ್ಸಲಾಂ               , ಜಿಲ್ಲಾ ಮೇಲ್ವಿಚಾರಕ ಸಿ.ಹೆಚ್.ಅಫ್ಸರ್, ಜಿಲ್ಲಾ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹೆಮಾನ್, ಪ್ರಮುಖರಾದ ಜಿ.ಹೆಚ್.ಮಹಮ್ಮದ್ ಹನೀಫ್ ಹಾಗೂ ಮುಹಮ್ಮದ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: