ಪ್ರಮುಖ ಸುದ್ದಿ

ಸರಕಾರದ ಶಾಶ್ವತ ನೆರವಿಗೂ ಮೊದಲೆ ಬದುಕಿನ ಹಾದಿಯೆಡೆಗೆ ನೊಂದವರ ನಡಿಗೆ : ತಾತ್ಕಾಲಿಕ ಶೆಡ್ ಬಗ್ಗೆ ಸಂತ್ರಸ್ತರ ನಿರಾಸಕ್ತಿ

ರಾಜ್ಯ(ಮಡಿಕೇರಿ) ಸೆ.4 :- ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗಾಗಿ ಸ್ಥಾಪಿಸಿದ ಪರಿಹಾರ ಕೇಂದ್ರಗಳಲ್ಲಿ ಆರಂಭಿಕ ದಿನಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರು ನೆಲೆಸಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ವಾತಾವರಣದಲ್ಲಾದ ಬದಲಾವಣೆಯಿಂದ ಈ ಸಂಖ್ಯೆ ಪ್ರಸ್ತುತ 1,666 ಕ್ಕೆ ಇಳಿದಿದೆ.

ಬಹಳಷ್ಟು ಮಂದಿಯಲ್ಲಿ ತಮ್ಮ ಬದುಕಿನ ಹಾದಿಯನ್ನು ತಾವೇ ಕಂಡು ಕೊಳ್ಳುವ ಹುಮ್ಮಸ್ಸು ಸರಕಾರದ ಶಾಶ್ವತ ನೆರವಿಗೂ ಮೊದಲೆ ಚಿಗುರೊಡೆಯತೊಡಗಿದೆ. ಜಿಲ್ಲಾಡಳಿತ ಮತ್ತು ಶಾಸಕರುಗಳ ಪ್ರಯತ್ನಗಳ ಹಿನ್ನೆಲೆಯಲ್ಲಿ ಸಂಪರ್ಕ ಕಳೆದುಕೊಂಡಿರುವ ಗ್ರಾಮೀಣ ಭಾಗಗಳಿಗೆ ಕನಿಷ್ಠ ಜೀಪನ್ನಾದರು ತೆಗೆದುಕೊಂಡು ಸಾಧ್ಯವಾಗಬಲ್ಲ ಸಣ್ಣ ಹಾದಿಗಳ ನಿರ್ಮಾಣ ಕಾರ್ಯ ಸಾಕಷ್ಟು ಭರದಿಂದ ನಡೆಯುತ್ತಿದೆ. ರಸ್ತೆ ಸಂಪರ್ಕವೇರ್ಪಟ್ಟಲ್ಲಿ ಗ್ರಾಮೀಣ ಭಾಗಗಳಲ್ಲಿ ಜೀವಕಳೆ ಮತ್ತೆ ಮೂಡಲಿದೆ ಎನ್ನುವ ವಿಶ್ವಾಸ ಗ್ರಾಮಸ್ಥರದ್ದು. ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ.   ಸಂತ್ರಸ್ತರಿಗೆ ವಿತರಿಸಲು ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸ್ವೀಕೃತವಾಗುತ್ತಿರುವ ಪರಿಹಾರ ಸಾಮಾಗ್ರಿಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರಗಳಾದ ನಗರದ ಜಿಲ್ಲಾಡಳಿತ ಭವನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗೋದಾಮು, ಕುಶಾಲನಗರ ಮತ್ತು ಪೊನ್ನಂಪೇಟೆಯ ಹಳೇ ನ್ಯಾಯಾಲಯ ಕಟ್ಟಡ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಗೆ ಆಹಾರ ಸಾಮಾಗ್ರಿಗಳು, ವೈದ್ಯಕೀಯ ಸಾಮಾಗ್ರಿಗಳು, ಕುಡಿಯುವ ನೀರು ಹಾಗೂ ಹಾಗೂ ಇತರೆ ಅಗತ್ಯ ಪರಿಹಾರ ಸಾಮಾಗ್ರಿಗಳು 10 ಭಾರಿ ಹಾಗೂ ಲಘು ವಾಹನಗಳಲ್ಲಿ  ಸೆ.3 ರಂದು ಜಿಲ್ಲೆಗೆ ಬಂದಿದೆ.

ವಿತರಣೆಯಾದ ಸಾಮಾಗ್ರಿಗಳು

320 ಕೆ.ಜಿ. ಅಕ್ಕಿ, 40 ಕೆ.ಜಿ. ಸಕ್ಕರೆ, 31 ಲೀಟರ್ ಎಣ್ಣೆ, 60 ಕೆ.ಜಿ. ತೊಗರಿ ಬೆಳೆ, 40 ಬಾಕ್ಸ್ ಕುಡಿಯುವ ನೀರಿನ ಬಾಟಲಿ, 475 ಹೊದಿಕೆಗಳು, 341 ಉಡುಗೆ ವಸ್ತುಗಳನ್ನು ಜಿಲ್ಲಾಡಳಿತದ ವತಿಯಂದ ಸಂತ್ರಸ್ತರಿಗೆ ಸೆ.3 ರಂದು ವಿತರಣೆ ಮಾಡಲಾಗಿದೆ.

ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರು

ಮಡಿಕೇರಿ ತಾಲೂಕಿನ 11 ಪರಿಹಾರ ಕೇಂದ್ರಗಳಲ್ಲಿ 430 ಕುಟುಂಬಗಳು ಆಶ್ರಯ ಪಡೆದಿದ್ದು, ಅವರಲ್ಲಿ 559 ಪುರುಷ ಮತ್ತು 592 ಮಹಿಳೆಯರು ಸೇರಿದಂತೆ 1151 ಜನ ಸಂತ್ರಸ್ತರಿದ್ದಾರೆ.

ಸೋಮವಾರಪೇಟೆ ತಾಲೂಕಿನ 3 ಪರಿಹಾರ ಕೇಂದ್ರಗಳಲ್ಲಿ 190 ಕುಟುಂಬಗಳು ಆಶ್ರಯ ಪಡೆದಿದ್ದು, ಅವರಲ್ಲಿ 251 ಪುರುಷ ಮತ್ತು 264 ಮಹಿಳೆಯರು ಸೇರಿದಂತೆ ಒಟ್ಟು 515 ಸಂತ್ರಸ್ತರಿದ್ದಾರೆ.  ಒಟ್ಟಾರೆ ಜಿಲ್ಲೆಯಲ್ಲಿರುವ 14 ಪರಿಹಾರ ಕೇಂದ್ರಗಳಲ್ಲಿ ಒಟ್ಟು 620 ಕುಟುಂಬಗಳು ಆಶ್ರಯ ಪಡೆದಿದ್ದು, ಅವರಲ್ಲಿ 810 ಪುರುಷರು ಮತ್ತು 856 ಮಹಿಳೆಯರು ಸೇರಿದಂತೆ ಒಟ್ಟು 1666 ಜನ ಸಂತ್ರಸ್ತರಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

26,743 ಆಹಾರ ಕಿಟ್ ವಿತರಣೆ

ಅತಿ ವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಬಿಪಿಎಲ್ ಮತ್ತು ಎಪಿಎಲ್ ಸಂತ್ರಸ್ತ ಕುಟುಂಬದವರಿಗೆ ವಿಶೇಷ ಅನ್ನಭಾಗ್ಯ ಯೋಜನೆಯಡಿ ಸರ್ಕಾರ 50 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ.

ಆ ದಿಸೆಯಲ್ಲಿ ಇದುವರೆಗೆ 28,900 ಆಹಾರ ಕಿಟ್‍ಗಳು ಜಿಲ್ಲೆಗೆ ಬಂದಿದ್ದು, ಈಗಾಗಲೇ 26,743 ಆಹಾರ ಕಿಟ್‍ಗಳನ್ನು ವಿತರಿಸಲಾಗಿದೆ. ಮಡಿಕೇರಿ ತಾಲೂಕಿನಲ್ಲಿ 14,258, ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 8,292 ಮತ್ತು ವಿರಾಜಪೇಟೆ ತಾಲೂಕಿನಲ್ಲಿ 4193 ಆಹಾರ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕರಾದ ಸದಾಶಿವಯ್ಯ ಅವರು ಮಾಹಿತಿ ನೀಡಿದ್ದಾರೆ.

ತಾತ್ಕಾಲಿಕ ಶೆಡ್ ಬೇಡ

ನಿರಾಶ್ರಿತ ಕುಟುಂಬಗಳಿಗೆ ತಾತ್ಕಾಲಿಕವಾಗಿ ಗುರುತಿಸಲ್ಪಟ್ಟ ಪ್ರದೇಶದಲ್ಲಿ ಶೆಡ್‍ಗಳನ್ನು ನಿರ್ಮಿಸಲು ಜಿಲ್ಲಾಡಳಿತ ಈಗಾಗಲೇ ಕ್ರಮ ಕೈಗೊಂಡಿದ್ದು, ಮಾದರಿ ಶೆಡ್‍ನ್ನು ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿಡಲಾಗಿದೆ. ಆದರೆ ಸಂತ್ರಸ್ತರು ಈ ಶೆಡ್‍ನಲ್ಲಿರಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಮಳೆ ಕಡಿಮೆಯಾಗಿ ಬಿಸಿಲು ಕಾಣಿಸಿಕೊಂಡಿದ್ದು, ಜಿಂಕ್‍ಶೀಟ್‍ನಿಂದ ನಿರ್ಮಿಸಿದ ಶೆಡ್ ಅತಿ ತಾಪಮಾನವನ್ನು ಉಂಟು ಮಾಡುವುದಲ್ಲದೆ ವಾಸಕ್ಕೆ ಯೋಗ್ಯವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹಸಿರ ಪರಿಸರದೊಂದಿಗೆ ಪ್ರಕೃತಿಯನ್ನೇ ಮನೆ ಮಾಡಿಕೊಂಡು ಇದ್ದ ಗ್ರಾಮಸ್ಥರಿಗೆ ಈ ಶೆಡ್ ಬಗ್ಗೆ ಒಲವಿಲ್ಲ. ಅಲ್ಲದೆ ತಾತ್ಕಾಲಿಕ ಶೆಡ್‍ನಲ್ಲಿ ಒಂದು ಬಾರಿ ನೆಲೆಸಲು ಆರಂಭಿಸಿದರೆ ನಂತರದ ದಿನಗಳಲ್ಲಿ ಶಾಶ್ವತ ನೆಲೆ ಕಲ್ಪಿಸುವ ಕಾಳಜಿಯನ್ನು ಸರಕಾರ ಕಳೆದುಕೊಳ್ಳಲಿದೆ ಎನ್ನುವ ಆತಂಕವೂ ಸಂತ್ರಸ್ತರಲ್ಲಿದೆ. ಈ ಬೆಳವಣಿಗೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಲಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: