ಕರ್ನಾಟಕಪ್ರಮುಖ ಸುದ್ದಿಮೈಸೂರು

ಯುವ ಜನತೆ ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

%e0%b2%a1%e0%b2%bb%e0%b2%86%e0%b2%a8%e0%b2%b8ಯುವಕರ ಮನಸ್ಸನ್ನು ಜಾತಿ, ಧರ್ಮ, ಕೋಮುವಾದದ ಹೆಸರಿನಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೆಡಿಸುವ ಪ್ರಯತ್ನ ಮಾಡುತ್ತಿದ್ದು, ಯುವಶಕ್ತಿ ಇಂತಹ ಕುತಂತ್ರಗಳಿಗೆ ಬಲಿಯಾಗದೆ ಗಟ್ಟಿಯಾಗಿ ವಿರೋಧಿಸಬೇಕು. ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಕಲಾನಿಧಿ ಯೂತ್ಸ್ ಅಸೋಸಿಯೇಷನ್ ವತಿಯಿಂದ ಶುಕ್ರವಾರ ಮೈಸೂರಿನ ಕಲಾಮಂದಿರಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಡೊಳ್ಳು ಬಡಿಯುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಯುವಶಕ್ತಿ ರಾಷ್ಟ್ರದ ಶಕ್ತಿಯಾಗಿದ್ದು ರಾಷ್ಟ್ರ ನಿರ್ಮಾಣಕ್ಕೆ, ಸಮಾಜದ ಅಭಿವೃದ್ಧಿಗೆ, ನಾಡಿನ ಸರ್ವತೋಮುಖ ಬೆಳವಣಿಗೆಗೆ ದುಡಿಯಬೇಕು. ಯುವಕರು ತಮ್ಮ ಮನಸ್ಸನ್ನು ಬೇರೆಡೆ ಹರಿಯಲು ಬಿಡಬಾರದು. ಕೋಮುವಾದಿಗಳು ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು ಇದರ ಬಗ್ಗೆ ಎಚ್ಚರದಿಂದಿರಬೇಕು. ಸರಿದಾರಿಯಲ್ಲಿ ಮುನ್ನಡೆದು ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಬೇಕು. ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳೆಸಿಕೊಂಡು ಮಾನವೀಯತೆಯ ಆಧಾರದ ಮೇಲೆ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಆಚಾರ ವಿಚಾರಗಳು ವಿನಿಮಯವಾಗಬೇಕು: ಭಾರತ ಜಗತ್ತಿನ ವಿಶಿಷ್ಟ ರಾಷ್ಟ್ರ. ಅನೇಕ ಭಾಷೆ, ಆಚಾರ ವಿಚಾರ, ಸಂಸ್ಕೃತಿ, ಪರಂಪರೆಯನ್ನೊಳಗೊಂಡು, ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿರುವ ರಾಷ್ಟ್ರ. ಇಂತಹ ಏಕತೆ ಸಾಕಾರಗೊಳ್ಳಬೇಕಾದರೆ ರಾಜ್ಯ ರಾಜ್ಯಗಳ ನಡುವಿನ ಆಚಾರ ವಿಚಾರ, ಸಂಸ್ಕೃತಿ, ಪರಂಪರೆಗಳು ವಿನಿಮಯವಾಗಬೇಕು. ಇಂತಹ ಕೂಟಗಳು ಹೆಚ್ಚೆಚ್ಚು ನಡೆಯಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಭಾರತೀಯ ಎಂಬ ಮನೋಭಾವ ಮನಸ್ಸಿನಲ್ಲಿ ಬೇರೂರಬೇಕು. ತಾಯ್ನಾಡನ್ನು ತಾಯಿಯಂತೆ ಗೌರವಿಸಬೇಕು.  ಆಗ ಮಾತ್ರ ಧರ್ಮ, ಭಾಷೆ, ಜಾತೀಯತೆಯ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಯುವಜನೋತ್ಸವದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 1500ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಅರ್ಜುನ ಪ್ರಶಸ್ತಿ ವಿಜೇತ ಅರ್ಜುನ್ ದೇವಯ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ, ನಜೀರ್ ಅಹಮದ್, ಮುಡಾ ಅಧ್ಯಕ್ಷ ಧ್ರುವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: