ಮೈಸೂರು

ಅಧಿಕಾರಿಗಳು ನೌಕರರ ಕಳ್ಳಾಟ: ಪಡಿತರ ಸಿಗದೆ ಗ್ರಾಮಸ್ಥರು ಕಂಗಾಲು ಆರೋಪ

ಬೈಲಕುಪ್ಪೆ: ಕಳೆದ ಎರಡು ತಿಂಗಳಿನಿಂದ ಸೀಮೆಎಣ್ಣೆ ಮತ್ತು ಪಡಿತರ ಪದಾರ್ಥಗಳನ್ನು ವಿತರಿಸದೆ ಇರುವ ಬಗ್ಗೆ ಪ್ರಶ್ನಿಸಿದ, ವಿತರಣಾ ಕೇಂದ್ರವನ್ನೇ ಮುಚ್ಚಿಸುವುದಾಗಿ ಆಹಾರ ಇಲಾಖೆ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾಜಿ ತಾ.ಪಂ. ಸದಸ್ಯ ರಂಗನಾಥ್ ಮತ್ತು ನಿವೃತ್ತ ಶಿಕ್ಷಕ ರಾಜು ಆರೋಪಿಸಿದ್ದಾರೆ.

ತಾಲೂಕಿನ ಬೆಣಗಾಲು ಗ್ರಾಮದಲ್ಲಿರುವ ಪಡಿತರ ಪದಾರ್ಥ ವಿತರಣೆ ಕೇಂದ್ರದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಇದರಿಂದ ಪಡಿತರ ಕಾರ್ಡುದಾರರ ಕಷ್ಟ ಕೇಳತೀರಲಾಗಿದೆ ಎಂದು ತಿಳಿಸಿದ್ದಾರೆ.

ಈ ಗ್ರಾಮದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು, ಕೂಲಿಕಾರ್ಮಿಕರು ಹೆಚ್ಚು ಇದ್ದು ಸಮಯಕ್ಕೆ ಸರಿಯಾಗಿ ಪಡಿತರವನ್ನು ಹಾಗೂ ಸೀಮೆಎಣ್ಣೆಯನ್ನು ಸರಿಯಾಗಿ ವಿತರಣೆ ಮಾಡದೆ ಜನರಿಗೆ ಇಲ್ಲಿ ವಿತರಕ ಮಹದೇವ್‌ ತೊಂದರೆ ಕೊಡುತಿದ್ದಾರೆ.

ಕೊಪ್ಪ ಕೃಷಿ ಪತ್ತಿನ ಸಹಕಾರದಿಂದ ಸಂಘದ ಉಪಕೇಂದ್ರವಾಗಿ ತೆರೆಯಲಾಗಿರುವ ಪಡಿತರ ವಿತರಣ ಕೇಂದ್ರವನ್ನು ಬೆಣಗಾಲು ಮತ್ತು ಆನಂದ ನಗರ ಸೇರಿದಂತೆ ಎರಡು ಗ್ರಾಮಗಳಲ್ಲಿ ವಿತರಿಸಲು ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ಡಿ.ಸಿ. ಜಗದೀಶ್ ಮತ್ತು ಆಹಾರ ನಿರೀಕ್ಷಕ ಸಣ್ಣಸ್ವಾಮಿ ಆದೇಶ ನೀಡಿದ್ದಾರೆ.

ಇಲ್ಲಿನ ಪಡಿತರ ವಿತರಣೆಯನ್ನು ಮಹದೇವ್‌ ಎಂಬುವನನ್ನು ನೇಮಕ ಮಾಡಲಾಗಿದ್ದು ಈತನು ಪ್ರತಿ ಶನಿವಾರ ಮಧ್ಯಾಹ್ನ 2 ಗಂಟೆಯ ನಂತರ ಬಂದು ಎರಡು ಗ್ರಾಮಗಳಲ್ಲಿ ಕೇವಲ 1 ರಿಂದ 3 ಗಂಟೆ ಅವಧಿಯಲ್ಲಿ ವಿತರಿಸಿ ನಾಪತ್ತೆಯಾಗುತ್ತಾನೆ.

ಕಾರ್ಡುಗಳಿಗೆ ನಿಯಮಾನುಸಾರ ನೀಡಬೇಕಿದ್ದ ಪಡಿತರ ಪಾದಾರ್ಥಗಳನ್ನು ವಿತರಿಸದೆ ನೊಂದಾಯಿಸುವುದನ್ನು ಪ್ರಶ್ನಿಸಿದರೆ ಬಾಯಿಗೆ ಬಂದಂತೆ ನಿಂದಿಸಿ ಉದ್ಧಟತನ ತೊರುತ್ತಾನೆ.

ಅಲ್ಲದೆ ಕಾರ್ಡಿನಲ್ಲಿ ನೊಂದಾಯಿಸಿದ್ದೇನೆ. ನೀವು ಅಕ್ಕಿ ಮತ್ತು ಧಾನ್ಯ ಪಾದಾರ್ಥಗಳನ್ನು ಪಡೆದಿದ್ದಿರಿ ಎಂದು ಹೇಳಿ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುಕೊಳ್ಳುತ್ತಿದಾರೆ.

ಈ ಬಗ್ಗೆ ಆಹಾರ ಇಲಾಖೆ ಶಿರೆಸ್ತೆದಾರ್ ಡಿ.ಸಿ.ಜಗದಿಶ್ ಮತ್ತು ಆಹಾರ ನಿರೀಕ್ಷಕ ಸಣ್ಣಸ್ವಾಮಿಯವರಿಗೆ ತಿಳಿಸಿದರೆ ಪಡಿತರ ವಿತರಣೆ ಉಪಕೇಂದ್ರವನ್ನು ಮುಚ್ಚಿಸುತ್ತೇನೆ, ನೀವೆಲ್ಲ ಕೊಪ್ಪಗೆ ಹೋಗಿ ಪಡಿತರ ಪಡೆದುಕೊಳ್ಳಿ ಎಂದು ಬೆದರಿಕೆ ಹಾಕುತ್ತಿದ್ದಾನೆ.

ಆನಂದನಗರ ಮತ್ತು ಬೆಣಗಾಲು ಗ್ರಾಮಕ್ಕೆ ನಾಲ್ಕು ಕಿ.ಮಿ. ದೂರ ತೆರಳಿ ಪಡಿತರ ಪದಾರ್ಥವನ್ನು ಪಡೆಯಬೇಕಾಗಿದೆ. ಇದರ ಅನಾನುಕೂಲವನ್ನು ಅರಿತುಕೊಂಡು ಪಡಿತರದಾರರಿಗೆ ಮೊಸ ಮಾಡುತ್ತಿದ್ದಾರೆ ಎಂದು ಗ್ರಾಮದ ಮುಖಂಡರಾದ ಕೃಷ್ಣ, ಗಿರೀಶ್, ರೂಪ, ಸಾವಿತ್ರಿ, ಲಕ್ಷ್ಮಿ, ಈರಯ್ಯ ಸೇರಿದಂತೆ ಹಲವರು ದೂರಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಕಾನೂನು ರೀತಿ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸದಿದ್ದರೆ ತಾಲ್ಲೂಕು ಕಛೇರಿ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವರದಿ: ಬಿ.ಆರ್. ರಾಜೇಶ್

Leave a Reply

comments

Related Articles

error: