ದೇಶಪ್ರಮುಖ ಸುದ್ದಿ

ರೈಲು ರಿಸರ್ವೇಷನ್ ಪಟ್ಟಿ ಅಂಟಿಸುವ ಪದ್ಧತಿಗೆ ತಿಲಾಂಜಲಿ!

ನವದೆಹಲಿ (ಸೆ.5): ರೈಲು ರಿಸರ್ವೇಶನ್ ಚಾರ್ಟ್‌ ಅನ್ನು ಕೋಚ್‌ಗಳ ಮೇಲೆ ಅಂಟಿಸುವ ಹಳೆಯ ಸಂಪ್ರದಾಯಕ್ಕೆ ಭಾರತೀಯ ರೈಲ್ವೆ ಮಂಗಳ ಹಾಡಿದೆ. ಈ ತಿಂಗಳ ಆರಂಭದಿಂದಲೇ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕಾಗದ ಉಳಿಸುವ ಪ್ರಯತ್ನದ ಭಾಗವಾಗಿ ದೇಶಾದ್ಯಂತ ಈ ಪದ್ಧತಿಯನ್ನು ನಿಲ್ಲಿಸಲಾಗಿದೆ. ಆದರೆ ಪ್ಲಾಟ್‌ಫಾರಂಗಳಲ್ಲಿನ ಸಾಫ್ಟ್ ಬೋರ್ಡ್ ಮೇಲೆ ಅಂಟಿಸುವ ಚಾರ್ಟ್‌ಗಳು ಮುಂದುವರಿಯಲಿವೆ ಎಂದು ತಿಳಿದುಬಂದಿದೆ.

ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಮಾರಾಟವಾಗುವ 11 ಲಕ್ಷ ರೈಲ್ವೆ ಟಿಕೆಟ್‌ಗಳ ಪೈಕಿ ಶೇ.70 ರಷ್ಟು ಇಂಟರ್ನೆಟ್‌ ಮೂಲಕವೇ ಬುಕ್ ಆಗುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಿಎಸ್‌ಟಿ, ಮುಂಬೈ ಸೆಂಟ್ರಲ್‌ನಂತಹ ಪ್ರಮುಖ ರೈಲು ನಿಲ್ದಾಣಗಳು ಚಾರ್ಟ್ ರದ್ದುಗೊಳಿಸಿ ತಿಂಗಳುಗಳೇ ಕಳೆದಿವೆ. ಕಳೆದ ಮಾರ್ಚ್‌ನಿಂದೀಚೆಗೆ ಈ ನಿಲ್ದಾಣಗಳಿಂದ ಹೊರಡುವ ರೈಲುಗಳ ಕೋಚ್‌ಗಳಲ್ಲಿ ಚಾರ್ಟ್ ಅಂಟಿಸುವ ಪದ್ಧತಿಯಿಲ್ಲ.

ಎ1, ಎ ಮತ್ತು ಬಿ ಕೆಟಗರಿಯ ನಿಲ್ದಾಣಗಳಲ್ಲಿ ಪ್ರಾಯೋಗಿಕ ರೂಪದಲ್ಲಿ ಮಾ.1ರಿಂದ 6 ತಿಂಗಳ ಕಾಲ ಚಾರ್ಟ್‌ಗಳನ್ನು ಅಂಟಿಸುವುದನ್ನು ಕೈಬಿಡಲಾಗಿತ್ತು.
2016 ರ ನವೆಂಬರ್‌ನಿಂದಲೇ ಪರಿಸರ ಸಂರಕ್ಷಣೆ ಭಾಗವಾಗಿ ನೈಋತ್ಯ ರೈಲ್ವೆ ಬೆಂಗಳೂರು ನಗರ ಹಾಗೂ ಯಶವಂತಪುರ ನಿಲ್ದಾಣಗಳಿಂದ ಹೊರಡುವ ರೈಲುಗಳಲ್ಲಿ ಚಾರ್ಟ್‌ಗಳನ್ನು ಅಂಟಿಸುವುದನ್ನು ಕೈಬಿಟ್ಟಿತ್ತು. ಈ ಕ್ರಮದ ಮೂಲಕ ದಕ್ಷಿಣ ರೈಲ್ವೆ 1,70,000 ರೂ. ಮೌಲ್ಯದ 28 ಟನ್ ಕಾಗದವನ್ನು ಉಳಿತಾಯ ಮಾಡಿತ್ತು. (ಎನ್.ಬಿ)

Leave a Reply

comments

Related Articles

error: