ಮೈಸೂರು

ಮಾನವೀಯ ಮೌಲ್ಯ ಬೆಳೆಸುವ, ಸಾಮರಸ್ಯ ನಿರ್ಮಾಣ ಮಾಡುವ ಶಿಕ್ಷಣ ನೀಡುವ ಅಗತ್ಯವಿದೆ : ಪ್ರೊ.ಕೆ.ನರಹರಿ

ಮೈಸೂರು,ಸೆ.5:- ಮಾನವೀಯ ಮೌಲ್ಯ ಬೆಳೆಸುವ ಮತ್ತು ಸಾಮರಸ್ಯ ನಿರ್ಮಾಣ ಮಾಡುವ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ನರಹರಿ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿಂದು ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಗೌರವ ಅರ್ಪಿಸಿದರು. ಬಳಿಕ ಮಾತನಾಡಿದ ಅವರು ಶಿಕ್ಷಕರಿಗೆ ಅನೇಕ ಸಮಸ್ಯೆಗಳಿರುತ್ತದೆ. ಎಲ್ಲಿಯೂ ನ್ಯೂನತೆ ಬರಬಾರದು. ಸದಾ ಕಾಲ ಕರ್ತವ್ಯದಲ್ಲಿರಬೇಕು. ಶಿಕ್ಷಣದಲ್ಲಿ ಮಾಹಿತಿ ಶಿಕ್ಷಣ, ಮೌಲ್ಯ ಶಿಕ್ಷಣ ಎಂಬ ಎರಡು ಮುಖಗಳಿವೆ.  ಮಾಹಿತಿ ಶಿಕ್ಷಣವು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ ಎಂದರು. ಒಮ್ಮೆ ಐಎಎಸ್ ಅಧಿಕಾರಿಯೋರ್ವರು ವಾಯು ವಿಹಾರಕ್ಕೆ ಹೊರಟಾಗ ಮರದಲ್ಲಿ ಕಟ್ಟಿದ ಸುಂದರವಾದ ಗೀಜಗನ ಗೂಡನ್ನು ನೋಡಿ ಇದನ್ನು ಮನೆಗೆ ಕೊಂಡೊಯ್ದು ಶೋ ಕೇಸ್ ನಲ್ಲಿ ಇಡಬೇಕು ಎಂದುಕೊಂಡು ತೆಗೆಯಲು ಪ್ರಯ್ನಪಟ್ಟು ಸೋಲುತ್ತಾರೆ. ಅದು ಕೈಗೆಟುಕದಾಗ ಅಲ್ಲೇ ಇದ್ದ ದನ ಕಾಯುವ ಹುಡುಗನನ್ನು ಕರೆದು ಈ ಹಕ್ಕಿಯ ಗೂಡು ತುಂಬಾ ಚೆನ್ನಾಗಿದೆ ನನಗೆ ತೆಗೆದುಕೊಡು ಮನೆಗೆ ಕೊಂಡ್ಹೋಗಿ ಶೋ ಕೇಸ್ ನಲ್ಲಿ ಇಡುತ್ತೇನೆ ಎನ್ನುತ್ತಾರೆ. ಅದಕ್ಕಾತ ನಾನು ಅದನ್ನು ತೆಗೆಯಲ್ಲ. ನಿಮಗೂ ತೆಗೆಯಲಿಕ್ಕೆ ಬಿಡಲ್ಲ. ಅದರಲ್ಲಿ ತಾಯಿ ಹಕ್ಕಿ ಮರಿಗಳನ್ನು ಬಿಟ್ಟು ಹೋಗಿರಬಹುದು. ಅಥವಾ ಮೊಟ್ಟೆಗಳನ್ನಿಟ್ಟಿರಬಹುದು. ಅದನ್ನು ತೆಗೆದು ಅದರ ಮರಿಗಳು, ಮೊಟ್ಟೆಗಳು ಕಾಣದಾದಾಗ ತಾಯಿ ಹಕ್ಕಿಯ ಚೀರಾಟ, ಗೋಳಾಟ ನನ್ನಿಂದ ನೋಡಲು ಸಾಧ್ಯವಿಲ್ಲ ಎಂದುತ್ತರಿಸುತ್ತಾನೆ. ಆಗ ಅವರಿಗೆ ಅವನು ಶಿಕ್ಷಿತನಾ ಅಥವಾ ಐಎಎಸ್ ಪದವಿ ಪಡೆದ ನಾನು ಶಿಕ್ಷಿತನಾ ಎಂದು ನಾಚಿಕೆಯಾಗುತ್ತದೆ ಎಂದು ಮೌಲ್ಯ ಶಿಕ್ಷಣಕ್ಕೊಂದು ಉದಾಹರಣೆ ನೀಡಿದರು. ಮೌಲ್ಯ ಶಿಕ್ಷಣದಿಂದ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಸಾಮರಸ್ಯ ನಿರ್ಮಾಣವಾಗುತ್ತದೆ. ಅದು ಬೋಧನೆಯಿಂದ ಬರಲಾರದು. ಬೇರೆಯವರನ್ನು ನೋಡಿ ಕಲಿಯಬೇಕು. ಒಳ್ಳೆಯ ಸಂಸ್ಕಾರ, ಒಳ್ಳೆಯ ವಾತಾವರಣದಲ್ಲಿ ಮಕ್ಕಳು ಬೆಳೆದರೆ ಇವುಗಳನ್ನೆಲ್ಲ ಬೆಳೆಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರಾಮುವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ, ಕುಲಸಚಿವ ಡಾ.ಎ.ಖಾದರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: