ಮೈಸೂರು

ಕೈ ಬೀಸಿ ಕರೆಯುತ್ತಿದೆ ಪುಷ್ಪರಾಶಿ..!

palace-webಹೂವೆಂಬುದು ಈ ಧರೆಯ ವಿಸ್ಮಯ. ಅದೊಂದು ಸಮೃದ್ಧ ಹಬ್ಬದ ಸಡಗರ. ಅದು ಹೃದಯದ ಕದ, ಬೆಚ್ಚನೆಯ ಪ್ರೀತಿ, ಹನಿ ಹನಿ ತೇವ, ಅದೊಂದು ನಿರೀಕ್ಷೆ, ಮದುವೆಯ ಸಂಭ್ರಮ. ರಾಶಿ ರಾಶಿ ಕನಸು. ಸ್ನೇಹ, ಅಂತಃಕರಣದ ಧಾರೆ ಧಾರೆ. ಅದೊಂದು ಮಾಂತ್ರಿಕ ಸ್ಪರ್ಶ. ಅದು ರಂಗು ರಂಗಿನ ಕಾಮನಬಿಲ್ಲು. ಭಕ್ತಿ, ಗೌರವ, ಗಾಂಭೀರ್ಯ ನೆಮ್ಮದಿಯ ಬದುಕಿಗೆ ಹೂವು ಒಂದು ಸುಂದರ ಸಂಕೇತ. ಆನಂದದ ಬದುಕಿಗೆ ಹೂವು ಒಂದು ಸಾಕ್ಷಿ. ಹೀಗೆ ಒಂದು ಸುಮಧುರ ಸಂಬಂಧವನ್ನೇ ತನ್ನ ಜತೆಗಿಟ್ಟುಕೊಂಡ ಅಪರೂಪದ ವಸ್ತು ಹೂವು!

ಇದೇನಪ್ಪ ಒಂದೇ ಸಮನೆ, ಒಂದೇ ಉಸುರಿನಲ್ಲಿ ಹೂವಿನ ಕುರಿತು ಏನೇನೋ ಹೇಳುತ್ತಾ ಇದ್ದಾರೆ ಅಂತ ಗಾಬರಿಯಾಗಬೇಡಿ. ಇಷ್ಟೆಲ್ಲಾ ವಿಷಯಗಳು ಒಮ್ಮೆಲೇ ಮನಸ್ಸಿಗೆ ಹೊಳೆದಿದ್ದು ಮೈಸೂರು ಅರಮನೆಯ ಮುಂದಿನ ಉದ್ಯಾನ ನೋಡಿದಾಗಲೇ. ಇಲ್ಲಿ ನಡೆಯುತ್ತಿರುವ ಪುಷ್ಪ ಪ್ರದರ್ಶನದಲ್ಲಿ ಅರಳಿದ ಹೂಗಳು ಗಮನ ಸೆಳೆಯುತ್ತಿವೆ.

palace-3-1ಹೂವಿಗೆ ಮನಸೋಲದವರಿಲ್ಲ. ಮನುಷ್ಯನ ಬದುಕು ಹೂಗಳೊಂದಿಗೆ, ಅದರ ಘಮದೊಂದಿಗೆ ಬೆಸೆದುಕೊಂಡಿದೆ ಎಂದರೆ ಅತಿಶಯವಲ್ಲ. ಹೂವಿಗೆ, ಹೂವಿನ ಮಾಧುರ್ಯಕ್ಕೆ, ಮೃದುತ್ವಕ್ಕೆ, ಚೆಂದಕ್ಕೆ, ಸುಕೋಮಲ ಸ್ಪರ್ಶಕ್ಕೆ ಮರುಳಾಗದವರು ಯಾರು? ಬಹುಶಃ ಹೂವಿಗೆ ಮರುಳಾಗದ ಜೀವಿ ಈ ಲೋಕದಲ್ಲಿ ಹುಟ್ಟಿಯೇ ಇಲ್ಲ. ಅದು ಎಂತಹ ಕೋಪಿಷ್ಟರನ್ನೂ ಬಲುಬೇಗ ತಣ್ಣಗಾಗಿಸುತ್ತದೆ.

ಅರಮನೆಯ ಆವರಣದಲ್ಲಿ ನಿಂತಾಗ ಒಮ್ಮೆಲೇ ಸ್ವರ್ಗದಲ್ಲಿ ನಿಂತ ಅನುಭವ. ಮನಸ್ಸಲ್ಲಿದ್ದ ದುಗುಡವೆಲ್ಲ ಕಳೆದು ಮನಸು ಹಗುರಾದಂತೆ. ಜಂಬೂ ಸವಾರಿ ಆನೆ, ಸಿಪಾಯಿಗಳ ಸಾಲು, ಯುದ್ಧ ಕಾಲದಲ್ಲಿ ಬಳಸುತ್ತಿದ್ದ ಫಿರಂಗಿ ಚಿಣ್ಣರ ಮನಗೆದ್ದ ಸ್ಪೈಡರ್‍ಮ್ಯಾನ್, ಮೊಲ, ಚಿಟ್ಟೆ, ಡಕ್, ಮಿಕ್ಕಿಮೌಸ್, ಪಕ್ಷಿ ಸೇರಿದಂತೆ ಹಲವು ಹೂವಿನಿಂದಲೇ ಸಿದ್ಧಗೊಂಡಿದೆ.

palace-515 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂಗಳು, ಬೋನ್ಸಾಯ್ ಗಿಡಗಳು ಹಾಗೂ  ಸ್ಟ್ಯಾಂಡ್ ಬೊಕೆಗಳು, ಒಂದು ಲಕ್ಷಕ್ಕೂ ಹೆಚ್ಚಿನ ಆಫ್ರಿಕನ್ ಮೇರಿ ಗೋಲ್ಡ್, ಆಂಟಿರಿನಮ್ (ಮಿಕ್ಸ್), ಸೆಲೋಸಿಯಾ, ಲೇಡಿ ಲೇಸ್, ಲೀಫಿ ಆರ್ನ್‍ಮೆಂಟಲ್, ಡಚ್ ರೋಸಸ್, ಕಟ್ ರೋಸಸ್, ಕ್ರೈಸಂತಮಮ್, ಕಾರಿನೇಷನ್, ಲಲಿಯನ್ಸ್, ಜರ್ಬೆರಾ, ಬ್ಲ್ಯೂ ಡೈಸಿ ಬರ್ಡ್ ಆಫ್ ಪ್ಯಾರಡೈಸ್ ಮೊದಲಾವುಗಳು ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಇನ್ನು ಹತ್ತು ದಿನಗಳ ಕಾಲ ಪುಷ್ಪ ರಾಶಿ ಮೈಸೂರಿನ ಜನತೆಯನ್ನು ತನ್ನತ್ತ ಕೈಬೀಸಿ ಕರೆಯಲಿದೆ.

ಈ ಪ್ರದರ್ಶನವು ಹತ್ತು ದಿನಗಳ ಕಾಲ ನಡೆಯಲಿದ್ದು, ಶುಕ್ರವಾರ ಚಾಲನೆ ನೀಡಲಾಗಿದೆ. ಶಾಸಕ ಎಂ.ಕೆ.ಸೋಮಶೇಖರ್ ಚಾಲನೆ ನೀಡಿದ್ದು, ಈ ಸಂದರ್ಭ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನಾ, , ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: