ಪ್ರಮುಖ ಸುದ್ದಿ

ಪೌಷ್ಠಿಕ ಆಹಾರದಿಂದ ಮಾತ್ರ ಮಕ್ಕಳ ಆರೋಗ್ಯ ರಕ್ಷಣೆ ಸಾಧ್ಯ : ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ ಸಲಹೆ

ರಾಜ್ಯ(ಮಡಿಕೇರಿ) ಸೆ.5 :- ಮಕ್ಕಳ ಬೆಳವಣಿಗೆಗೆ ಸಮತೋಲಿತ ಮತ್ತು ಆರೋಗ್ಯಯುತವಾಗಿರಲು ಪೌಷ್ಠಿಕ ಆಹಾರ ಅತ್ಯಗತ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಾಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.  ಸ್ಥಳೀಯವಾಗಿ ಸಿಗುವಂತಹ ಆಹಾರ ಪದಾರ್ಥಗಳು ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದ್ದು, ಇದರ ಸದುಪಯೋಗವನ್ನು ತಾಯಂದಿರು ಮಕ್ಕಳಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳ ವಿಭಾಗದ ಹಿರಿಯ ತಜ್ಞರಾದ ಡಾ.ಕೃಷ್ಣಾನಂದ್ ಪ್ರತಿ ಮಗುವಿಗೆ ಮೊದಲ ಎರಡು ವರ್ಷದಲ್ಲಿ ಪೌಷ್ಠಿಕ ಆಹಾರವು ಮಗುವಿನ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ತಾಯಂದಿರು ಇದರ ಬಗ್ಗೆ ಹೆಚ್ಚಿನ ಗಮನವಹಿಸಿ ಪೌಷ್ಠಿಕ ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಮಗುವಿನ ಆರೋಗ್ಯಯುತ ಬೆಳವಣಿಗೆಗೆ ಬೇಕಾದಂತಹ ಪೌಷ್ಠಿಕ ಆಹಾರದ ಮಾಹಿತಿ ಮತ್ತು ಇದರ ಸದುಪಯೋಗವನ್ನು ಪ್ರತಿ ತಾಯಂದಿರು ತಿಳಿದುಕೊಂಡು ಮಗುವಿನ ಪೌಷ್ಠಿಕ ಆಹಾರದೊಂದಿಗೆ ಬೆಳವಣಿಗೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಸರ್ಜನ್ ಡಾ.ಜಗದೀಶ್ ಮಾತನಾಡಿ ಮಕ್ಕಳ ಬೆಳವಣಿಗೆಗೆ ಪೌಷ್ಠಿಕ ಆಹಾರ ಅತ್ಯವಶ್ಯಕ. ಮಕ್ಕಳ ಬೆಳವಣಿಗೆ ಹಂತದಲ್ಲಿ ಪೌಷ್ಠಿಕ ಆಹಾರದ ಕೊರತೆ ಕಾಣಿಸಿಕೊಳ್ಳದಂತೆ ಗಮನಹರಿಸಿ ತಾಯಂದಿರು ಹೆಚ್ಚು ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ನೀಡಿ ಮಕ್ಕಳನ್ನು ಆರೋಗ್ಯಯುತರಾಗಿ ಬೆಳಸುವಂತಾಗಬೇಕು ಎಂದು ಸಲಹೆ ನೀಡಿದರು.

ವೈದ್ಯಕೀಯ ಕಾಲೇಜಿನ ಪ್ರಾಧ್ಯಪಕ ಡಾ.ರಾಮಚಂದ್ರ ಕಾಮತ್ ಅವರು ಮಾತನಾಡಿ ಸಾತ್ವಿಕ ಹಾಗೂ ಸಮತೋಲನ ಆಹಾರದಿಂದ ಮಗು ಮತ್ತು ತಾಯಂದಿರ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ನುಡಿದರು.

ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ್ ಅವರು ಮಾತನಾಡಿ ರಾಷ್ಟ್ರೀಯ ಪೌಷ್ಠಿಕ ಆಹಾರ ಸಾಪ್ತಾಹವು ಸೆ.1 ರಿಂದ 7 ರವರೆಗೆ ನಡೆಯಲಿದ್ದು, ಇದರ ಮಹತ್ವವನ್ನು ತಾಯಂದಿರಿಗೆ ತಿಳಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರತಿ ಮಗುವಿನ ಆರೋಗ್ಯಯುತ ಬೆಳವಣಿಗೆ ಪೌಷ್ಠಿಕ ಆಹಾರ ಅತಿ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರವು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಈಗಾಗಲೇ ಪುನರ್ವಸತಿ ಕೇಂದ್ರವನ್ನು ಮಕ್ಕಳ ವಿಭಾಗದಲ್ಲಿ ಪ್ರಾರಂಭ ಮಾಡಿದ್ದು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಈ ಕೇಂದ್ರದಲ್ಲಿ 15 ದಿನ ಆರೈಕೆ ಮಾಡಲಾಗುವುದು ಮತ್ತು ಪ್ರತಿ ತಿಂಗಳ ಮೊದಲನೆಯ ಮಂಗಳವಾರ ಅಪೌಷ್ಠಿಕ ನಿವಾರಣೆ ಶಿಬಿರ ನಡೆಯುತ್ತಿದ್ದು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇದರ ಸದುಪಯೋಗ ಮಾಡಿಕೊಳ್ಳುವಂತಾಗಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಭೋಧಕ ಆಸ್ಪತ್ರೆಯ ಆಡಳಿತಾಧಿಕಾರಿ ಮೇರಿ ನಾಣಯ್ಯ, ವೈದ್ಯರು, ಶುಶ್ರೂಕಿಯರು, ವೈದ್ಯಕೀಯ ವಿದ್ಯಾರ್ಥಿಗಳು ಇತರರು ಇದ್ದರು. ಮಕ್ಕಳ ವಿಭಾಗದ ವೈದ್ಯರಾದ ಡಾ.ಮಾಲತೇಶ್ ಅವರು ಸ್ವಾಗತಿಸಿ, ನಿರೂಪಿಸಿದರು. ಡಾ.ಕುಮಾರ್ ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: