
ಮೈಸೂರು
ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವವವರನ್ನು ಜೈಲಿಗಟ್ಟಿ ದೇಶದ್ರೋಹಿಗಳಂತೆ ಕಾಣಲಾಗುತ್ತಿದೆ : ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಗಂಭೀರ ಆರೋಪ
ಮೈಸೂರು,ಸೆ.6:- ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ತಮ್ಮ ಹಾಗೂ ತಮ್ಮ ಸರ್ಕಾರದ ಧ್ವನಿ ಎತ್ತುವ ದೇಶದ ಬುದ್ಧಿ ಜೀವಿಗಳನ್ನು ಹಾಗೂ ಪ್ರಗತಿ ಪರರನ್ನು ಜೈಲಿಗಟ್ಟುತ್ತಿರುವ ಮೂಲಕ ಅವರನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿಯ ಛಾಯೆ ಕಾಣಿಸುತ್ತಿದೆ ಎಂದು ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ತಮ್ಮ ಅಧೀನದಲ್ಲಿರುವ ಕೇಂದ್ರದ ತನಿಖಾ ಸಂಸ್ಥೆಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿರುವ ಮೋದಿಯವರ ನಡೆಯಿಂದ ದೇಶದ ನೆಮ್ಮದಿಗೆ ಭಂಗ ಉಂಟಾಗುವ ಅನಾಹುತವಿದೆ ಎಂದು ಎಚ್ಚರಿಸಿದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯಿಂದ ದೇಶದ ಜನಕ್ಕೆ ಹಲವಾರು ಜನಪರ ಕಾರ್ಯಕ್ರಮಗಳು ಸಿಕ್ಕವು ಎಂದು ಸಮರ್ಥಿಸಿಕೊಂಡರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ದೇಶಾದ್ಯಂತ ವಿಚಾರವಾದಿಗಳು ಹಾಗೂ ಪ್ರಗತಿಪರರು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ಮಾದೇಗೌಡ, ಮುಖಂಡರಾದ ಕಿರಂಗೂರು ಬಸವರಾಜು, ಅಣ್ಣಯ್ಯ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)