ಪ್ರಮುಖ ಸುದ್ದಿ

ಇಂದಿಗೂ ಆರ್ಥಿಕ ಚೇತರಿಕೆ ಕಾಣದ ಭಾರೀ ಮಳೆಯಿಂದ ತತ್ತರಿಸಿದ ಮಡಿಕೇರಿ

ರಾಜ್ಯ(ಮಡಿಕೇರಿ)ಸೆ.5:- ಮಹಾಮಳೆಯ ರಣಕೇಕೆಯಿಂದ ಜಿಲ್ಲೆಯ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬಿದ್ದಿದೆ. ಅಂಗಡಿ, ಮಳಿಗೆಗಳು, ಶಾಪಿಂಗ್ ಸೆಂಟರ್‍ಗಳೆಲ್ಲವೂ ಭಣಗುಡುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಇಂದಿಗೂ ಆರ್ಥಿಕ ಚೇತರಿಕೆ ಕಂಡಿಲ್ಲ.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರಸ್ತೆ ಧ್ವಂಸಗೊಂಡಿರುವುದು, ಭೂ ಕುಸಿತ ಮತ್ತಿತರ ಕಾರಣಗಳಿಂದ ಜನರೂ ಕೂಡ ನಗರ ಪಟ್ಟಣಗಳ ಕಡೆ ಮುಖ ಮಾಡುತ್ತಿಲ್ಲ. ಭತ್ತ, ಕಾಫಿ, ಕರಿಮೆಣಸು, ಅಡಿಕೆ ಬೆಳೆಗಳು ಕೂಡ ಭಾರಿ ಪ್ರಮಾಣದಲ್ಲಿ ನಾಶಗೊಂಡಿದ್ದು, ವ್ಯಾಪಾರ ವಹಿವಾಟು ಕ್ಷೀಣಗೊಳ್ಳಲು ಕಾರಣವಾಗಿದೆ. ಮಡಿಕೇರಿಯ ಸುತ್ತಮುತ್ತಲ ಗ್ರಾಮಗಳ ರಸ್ತೆಗಳು ಭಾರಿ ಹಾನಿಗೆ ತುತ್ತಾಗಿರುವುದರಿಂದ ಖಾಸಗಿ ಬಸ್‍ಗಳ ಸಂಚಾರ ಕೂಡ ದುಸ್ತರವಾಗಿ ಪರಿಣಮಿಸಿದೆ. ಇರುವ ರಸ್ತೆಗಳಲ್ಲಿ ನಷ್ಟದಿಂದಲೇ ಬಸ್‍ಗಳು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಜಿಲ್ಲೆಯಲ್ಲಿ 3500 ಮಂದಿ ಕಾರ್ಮಿಕರು ಖಾಸಗಿ ಬಸ್ ಉದ್ಯಮವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದು, ಅವರ ಭವಿಷ್ಯ ಕೂಡ ಅತಂತ್ರವಾಗಿದೆ. ಚಾಲಕರು, ನಿರ್ವಾಹಕರು, ಕ್ಲೀನರ್‍ಗಳ ಸಂಬಳ ಕೂಡ ಕಡಿತ ಮಾಡಲಾಗುತ್ತಿದ್ದು, ಸಂಸಾರ ನಿರ್ವಹಣೆ ಹೇಗೆಂಬ ಚಿಂತೆ ಅವರನ್ನು ಕಾಡುತ್ತಿದೆ. ಟ್ಯಾಕ್ಸಿಗಳು, ಆಟೋ ರಿಕ್ಷಾಗಳು ಕೂಡ ಬಾಡಿಗೆ ಇಲ್ಲದೆ ದಿನ ದೂಡುವಂತಾಗಿದೆ. ಕಳೆದ 2 ದಿನಗಳಿಂದ ಮಳೆ ಸಂಪೂರ್ಣ ವಿರಾಮ ನೀಡಿದ್ದು, ಬಿಸಿಲಿನ ದರ್ಶನವಾಗುತ್ತಿದೆ. ಭಾರೀ ಮಳೆ ಯಿಂದ ಕಂಗೆಟ್ಟಿದ್ದ ಜನರಿಗೆ ಇದರಿಂದ ನೆಮ್ಮದಿ ದೊರೆತಂತಾಗಿದೆ. ಪ್ರವಾಸೋದ್ಯಮ ಕ್ಷೇತ್ರ ಕೂಡ ಕುಗ್ಗಿ ಹೋಗಿದ್ದು ಹೋಂ ಸ್ಟೇ, ಲಾಡ್ಜ್‍ಗಳು ನಷ್ಟ ಅನುಭವಿಸುತ್ತಿವೆ. ಒಟ್ಟಿನಲ್ಲಿ ಮಹಾ ಮಳೆ ಪ್ರವಾಹ ಮತ್ತು ಭೂ ಕುಸಿತ ದೊಂದಿಗೆ ಜಿಲ್ಲೆಯ ಆರ್ಥಿಕತೆಯ ಮೇಲೂ ಮುನಿಸನ್ನು ಮುಂದುವರಿಸಿದಂತಿದೆ.

ಪ್ರಕೃತಿ ವಿಕೋಪ ವನ್ನು ಮುಂದಿಟ್ಟು ಹೊರ ಜಿಲ್ಲೆಯಿಂದ ಕೊಡಗಿಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರುವುದು ಸರಿಯಲ್ಲ. ಇಡೀ ಕೊಡಗಿನ ಪ್ರವಾಸ ತಾಣವನ್ನು ನಿರ್ಬಂಧಿಸುವ ಅವಶ್ಯಕತೆಯೂ ಇಲ್ಲ. ಕೊಡಗನ್ನು ಮರು ನಿರ್ಮಾಣ ಮಾಡಲು ಎಲ್ಲಾ ರೀತಿಯಲ್ಲೂ ಸಹಕರಿಸಲು ಬದ್ದರಾಗಿದ್ದು, ನಮಗೆ ಪ್ರವಾಸೋದ್ಯಮವನ್ನು ನಿಯಮಕ್ಕನುಸಾರವಾಗಿ ಪ್ರಕೃತಿಗೆ ಯಾವುದೇ ಧಕ್ಕೆ ಇಲ್ಲದಂತೆ ಮುಂದುವರಿಸಬೇಕೆಂದು ಟೂರಿಸಂ ಅಧ್ಯಕ್ಷ ಸಾಗರ್ ಗಣಪತಿ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಯವರು ಹೊರ ಜಿಲ್ಲೆಯಿಂದ ಕೊಡಗಿಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ. ಭೂ ಕುಸಿತ ಹಾಗೂ ನೆರೆ ಪೀಡಿತ ಪ್ರದೇಶಗಳಿಗೆ ಮಾತ್ರ ಪ್ರವಾಸಿಗರು ಹೋಗುವುದಕ್ಕೆ ನಿರ್ಬಂಧ ಸರಿ. ಆದರೆ ಇಡೀ ಕೊಡಿಗಿನ ಪ್ರವಾಸ ತಾಣವನ್ನು ನಿರ್ಬಂಧಿಸುವ ಅವಶ್ಯಕತೆ ಇಲ್ಲ. ಇದರಿಂದ ರೈತರ ಕೃಷಿ ಹಾಗೂ ಕೊಡಗಿನ ವ್ಯಾಪಾರಿಗಳ ಆರ್ಥಿಕ ಸ್ಥಿತಿ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದಿದ್ದಾರೆ.

ಪ್ರವಾಸಿಗರ ನಿರ್ಬಂಧದಿಂದಾಗಿ, ರೈತರು, ಟ್ಯಾಕ್ಸಿ ಚಾಲಕರು, ಹೊಟೇಲ್, ಮಾಂಸ ಹಾಗೂ ತರಕಾರಿ ವ್ಯಾಪಾರಿಗಳು ಪ್ರವಾಸಿಗರ ವ್ಯವಹಾರದಿಂದ ವಂಚಿತರಾಗಿದ್ದಾರೆ. ಕೊಡಗು ಜಿಲ್ಲೆಯ ಈಗಿನ ಪ್ರವಾಸೋದ್ಯಮದಿಂದ ಕೊಡಗಿನ ಪ್ರಕೃತಿಗೆ ಯಾವುದೇ ಧಕ್ಕೆ ಇಲ್ಲ. ಬದಲಾಗಿ ಪ್ರವಾಸೋದ್ಯಮ ಆದಾಯದ ಮೂಲವೂ ಆಗಿದೆ. ಜಿಲ್ಲಾಡಳಿತ ತಕ್ಷಣ ಪ್ರವಾಸಿಗರ ನಿರ್ಬಂಧದ ಆದೇಶವನ್ನು ಮರು ಪರಿಶೀಲಿಸಿ, ತೆರವುಗೊಳಿಸಿ ಕೊಡಗನ್ನು ಈ ಹಿಂದಿನಂತೆಯೇ ಪ್ರವಾಸಿ ತಾಣವಾಗಿ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: