ಮೈಸೂರು

ಮೈಸೂರು ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕೈಜೋಡಿಸಿ: ಡಿ.ರಂದೀಪ್

ದೇಶದ ಸ್ವಚ್ಛ ನಗರಗಳ ಸಾಲಿನಲ್ಲಿ ಸತತ ಎರಡು ಬಾರಿ ಮೊದಲನೆ ಸ್ಥಾನ ಪಡೆದಿದ್ದ ಮೈಸೂರು ಈ ಬಾರಿಯು ಅದೇ ಸ್ಥಾನ ಉಳಿಸಿಕೊಳ್ಳಲು ನಗರದ ಸಮಸ್ತ ನಾಗರಿಕರು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ಸರ್ವೇಕ್ಷಣೆ 2017, ಘನತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ ಸ್ವಚ್ಛತೆ ನಿರ್ವಹಣೆಗಾಗಿ ಕೇಂದ್ರ ಸರಕಾರ ನಗರಾಭಿವೃದ್ಧಿ ಸಚಿವಾಲಯ ಸ್ವಚ್ಛತಾ ಆ್ಯಪ್ ಬಿಡುಗಡೆ ಮಾಡಿದೆ. ಇದನ್ನು ಡೌನ್‍ಲೋಡ್ ಮಾಡಿಕೊಂಡು ಸ್ವಚ್ಛತೆಯ ಕುಂದುಕೊರತೆ ಫೊಟೋ ತೆಗೆದು ಅಪ್‍ಲೋಡ್ ಮಾಡಬಹುದು.24 ಗಂಟೆಯೊಳಗೆ ಸಮಸ್ಯೆಗೆ ಪಾಲಿಕೆಯು ಸ್ಪಂದಿಸುತ್ತದೆ. ಇದಕ್ಕೆ ತೃಪ್ತಿ ಇದೆ ಎಂಬ ಪ್ರತಿಕ್ರಿಯೆ ನೀಡಿದರೆ ಹೆಚ್ಚಿನ ಅಂಕ ಪಡೆಯಬಹುದು ಎಂದರು.

ಮೈಸೂರು ನಗರದ ಸ್ವಚ್ಛತೆ ಸರ್ವೇ ಕಾರ್ಯ 2017ರ ಜ.4ರಿಂದ ಫೆ.4ರವರೆಗೆ ನಡೆಯಲಿದೆ. ಕಳೆದ ಎರಡು ವರ್ಷಗಳಿಂದ 10 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ನಗರಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುತ್ತಿದ್ದು, 73 ನಗರಗಳು ಭಾಗವಹಿಸಿದ್ದವು. ಈ ವರ್ಷ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದರಿಂದ ಸುಮಾರು 400 ಕ್ಕೂ ಹೆಚ್ಚು ನಗರಗಳನ್ನು ಸ್ಪರ್ಧೆಗೆ ನಾಮ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಮೈಸೂರಿನ ಹೆಸರು ಉಳಿಸಿಕೊಳ್ಳಲು ಯತ್ನಿಸಬೇಕೆಂದರು.

ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಸೋಮಶೇಖರ್, ನಗರ ಪಾಲಿಕೆ ಹೆಚ್ಚುವರಿ ಆಯುಕ್ತ ರಾಜು, ಆರೋಗ್ಯಾಧಿಕಾರಿ ಡಾ.ನಾಗರಾಜು, ಅಧೀಕ್ಷಕ ಎಂಜಿನಿಯರ್ ಸುರೇಶ್ ಬಾಬು, ಎಸಿಪಿಗಳಾದ ಮಲ್ಲಿಕ್, ರಾಜಶೇಖರ್ ಉಪಸ್ಥಿತರಿದ್ದರು.

Leave a Reply

comments

Related Articles

error: