ಪ್ರಮುಖ ಸುದ್ದಿ

ನೇಪಾಳದ ಪಶುಪತಿನಾಥನ ದರ್ಶನಕ್ಕೆ ಮುಂದಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

ರಾಜ್ಯ(ಬೆಂಗಳೂರು)ಸೆ.6:- ಪುತ್ರ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯ ವೃದ್ಧಿಗಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಇದೀಗ ವಿದೇಶದಲ್ಲಿರುವ ದೇವರ ಮೊರೆ ಹೋಗಿದ್ದಾರೆ. ನಾಳೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಕುಟುಂಬ ಸಮೇತರಾಗಿ ನೇಪಾಳದ ಪಶುಪತಿನಾಥ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಸಿಎಂ ಹೆಚ್.ಡಿ ಕುಮಾರಸ್ವಾಮಿ ಚುನಾವಣೆಗೂ ಮುನ್ನ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಪುತ್ರನ ಆರೋಗ್ಯ ವೃದ್ಧಿ ಮತ್ತು ಸಮ್ಮಿಶ್ರ ಸರ್ಕಾರದ ಸುಭದ್ರತೆಗಾಗಿ  ಕಠ್ಮಂಡುವಿನ ಪಶುಪತಿ ದೇವಾಲಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಇಂದು ಸಂಜೆ ಬೆಂಗಳೂರಿನಿಂದ ಕಠ್ಮಂಡುಗೆ ಪ್ರವಾಸ ಕೈಗೊಳ್ಳಲಿರುವ ದೇವೇಗೌಡರು, ನಾಳೆ ಬೆಳಗ್ಗೆ ಪಶುಪತಿ ದೇವಾಲಯದಲ್ಲಿ ಶಿವನ ದರ್ಶನ ಪಡೆಯಲಿದ್ದಾರೆ. ಕುಟುಂಬ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಾಳೆ ಸಂಜೆ ದೆಹಲಿಗೆ ವಾಪಾಸ್ಸಾಗಲಿದ್ದಾರೆ. ಅವರ ಪತ್ನಿ ಚೆನ್ನಮ್ಮ, ಪುತ್ರಿ ಶೈಲಜಾ ಚಂದ್ರಶೇಖರ್, ಪುತ್ರ ಸಚಿವ ಎಚ್.ಡಿ.ರೇವಣ್ಣ, ಮೊಮ್ಮಗ ಡಾ.ಸೂರಜ್ ರೇವಣ್ಣ, ಡಾ.ಸೌಮ್ಯ ರಮೇಶ್, ಸುಕೀರ್ತ ರಮೇಶ್ ಕೂಡ ದೇವೇಗೌಡರೊಂದಿಗೆ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು  ಹೇಳಲಾಗುತ್ತಿದೆ. ಮಹಾನ್ ದೈವ ಭಕ್ತರಾಗಿರುವ ಹೆಚ್.ಡಿ.ದೇವೇಗೌಡರು ದೆಹಲಿಯ ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಪಶುಪತಿನಾಥನ ದರ್ಶನ ಪಡೆಯುತ್ತಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: