
ಪ್ರಮುಖ ಸುದ್ದಿ
ಕೊಳ್ಳೇಗಾಲ ತಾಲೂಕಿನ ನಗರಸಭಾ ನೂತನ ಸದಸ್ಯ ಜಿ.ಪಿ.ಶಿವಕುಮಾರ್ ಗೆ ಕೊಲೆ ಬೆದರಿಕೆ
ರಾಜ್ಯ(ಚಾಮರಾಜನಗರ)ಸೆ.6:- ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನೂತನ ನಗರಸಭಾ ಸದಸ್ಯರೋರ್ವರಿಗೆ ಪೊಲೀಸ್ ಇನ್ಸಪೆಕ್ಟರ್ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನಗರಸಭೆಯ 10 ನೇ ವಾರ್ಡಿನ ಬಿಜೆಪಿ ನೂತನ ಸದಸ್ಯ ಜಿ.ಪಿ.ಶಿವಕುಮಾರ್ ಅವರಿಗೆ ಬೆಂಗಳೂರಿನ ಸರ್ಕಲ್ ಇನ್ಸಪೆಕ್ಟರ್ ಮಹಾನಂದ್ ಎಂಬವರು ದೂರವಾಣಿ ಕರೆ ಮಾಡಿ ಎನ್ ಕೌಂಟರ್ ಮಾಡುವ ಬೆದರಿಕೆಯೊಡ್ಡಿದ್ದಾರೆ. ನಿನ್ನೆ ರಾತ್ರಿ 10.40 ರಲ್ಲಿ ಮೊಬೈಲ್ ಮೂಲಕ ನಗರಸಭೆ ಸದಸ್ಯ ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದು, ಕೊಲೆ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಕೊಳ್ಳೇಗಾಲ ಪೊಲೀಸರಿಗೆ ದೂರು ನೀಡಿದರೂ ಅವರು ಎಫ್ ಐ ಆರ್ ದಾಖಲಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ದೂರು ಸ್ವೀಕಾರ ರಸೀತಿ ನೀಡಿ ಕೈ ತೊಳೆದುಕೊಂಡಿದ್ದಾರೆ ಎನ್ನಲಾಗಿದ್ದು, ಪೊಲೀಸ್ ಇನ್ಸಪೆಕ್ಟರ್ ಮಹಾನಂದ್ ಮೇಲೆ ಕ್ರಮ ಕೈಗೊಳ್ಳುವಂತೆ ನಗರಸಭೆ ಸದಸ್ಯ ಶಿವಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. (ಕೆ.ಎಸ್,ಎಸ್.ಎಚ್)