ಪ್ರಮುಖ ಸುದ್ದಿ

ಆಶ್ಲೇಷ ದಾಳಿಯಿಂದ ನಗರಸಭೆಗೂ ಅಪಾರ ನಷ್ಟ : ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಲು ತುರ್ತು ಸಭೆ ನಿರ್ಧಾರ

ರಾಜ್ಯ(ಮಡಿಕೇರಿ) ಸೆ.6 :-  ಪ್ರಾಕೃತಿಕ ವಿಕೋಪದಿಂದ ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಆಸ್ತಿಪಾಸ್ತಿಗಳಿಗೆ ವ್ಯಾಪಕ ಹಾನಿಯಾಗಿದ್ದು, ಪರಿಹಾರ ಕಾರ್ಯಗಳಿಗಾಗಿ ಹೆಚ್ಚಿನ ಅನುದಾನ ಒದಗಿಸುವಂತೆ ಸರ್ಕಾರವನ್ನು ಕೋರಲು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ನಗರಸಭೆಯ ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.

ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ಆಯೋಜಿತ ತುರ್ತು ಸಭೆಯಲ್ಲಿ, ನಗರ ವ್ಯಾಪ್ತಿಯಲ್ಲಿ ನಡೆದ ಹಾನಿಯ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತಲ್ಲದೆ, ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.  ಕುಸಿದ 80 ಮನೆಗಳು- ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು, ಪ್ರಾಕೃತಿಕ ವಿಕೋಪದಿಂದ ನಗರ ವ್ಯಾಪ್ತಿಯಲ್ಲಿ ಸಂಭವಿಸಿರುವ ಆಸ್ತಿಪಾಸ್ತಿ ಹಾನಿಯ ಕುರಿತು ಸಭೆಗೆ ಮಾಹಿತಿ ನೀಡಿ,  ನಗರದಲ್ಲಿ 80 ಮನೆಗಳು ಸಂಪೂರ್ಣ ಕುಸಿದಿದ್ದು, 380 ಮನೆಗಳು ವಾಸ ಮಾಡಲು ಸಾಧ್ಯವಾಗದಷ್ಟು ಹಾನಿಗೊಳಗಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಪ್ರಭಾರ ಪೌರಾಯುಕ್ತ ಗೋಪಾಲಕೃಷ್ಣ, ನಗರ ವ್ಯಾಪ್ತಿಯಲ್ಲಿ 10 ಕೋಟಿ ರೂ. ಆಸ್ತಿ ಪಾಸ್ತಿ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಸಲಾಗಿದೆಯೆಂದು ತಿಳಿಸಿದರು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಹತ್ತು ಕೋಟಿಯಷ್ಟೆ ಹಾನಿಯಾಗಿದೆಯೆಂದು  ವರದಿ ಸಲ್ಲಿಸುವುದು ಸಮಂಜಸವಲ್ಲ. ಇದಕ್ಕೂ ಮೀರಿದ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಾನಿಯ ಸಮಗ್ರ ವರದಿ ತಯಾರಿಸಿ, ನಷ್ಟದ ಅಂದಾಜು ಪಟ್ಟಿಯೊಂದಿಗೆ ಮುಖ್ಯ ಮಂತ್ರಿಗಳನ್ನು ನಿಯೋಗ ತೆರಳಿ ಭೇಟಿಯಾಗಿ ಅನುದಾನಕ್ಕೆ ಕೋರಿಕೆ ಸಲ್ಲಿಸುವುದು ಅತ್ಯವಶ್ಯವೆಂದರು.

ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯಿಂದಲೂ ನಗರ ವ್ಯಾಪ್ತಿಯಲ್ಲಿನ ಅತಿವೃಷ್ಟಿ ಹಾನಿಗೆ ಸೂಕ್ತ ಪರಿಹಾರವನ್ನು  ಪಡೆಯುವ ಮೂಲಕ  ಕಾಯೋನ್ಮುಖವಾಗುವಂತೆ ಸಲಹೆ ನೀಡಿದರು.  ಬೆಟ್ಟದ ಮೇಲೆ ಮನೆ ನಿರ್ಮಾಣಕ್ಕೆ ನಿರ್ಬಂಧ- ಮಡಿಕೇರಿ ನಗರ ವ್ಯಾಪ್ತಿಯ ಬೆಟ್ಟ ಪ್ರದೇಶಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ಮನೆಗಳ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡದಂತೆ ಹಾಗೂ ಅನಧಿಕೃತ ಮನೆಗಳ ನಿರ್ಮಾಣಕ್ಕೆ ತಡೆಯೊಡ್ಡುವ ಮಹತ್ವದ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ಇರುವ ಅನಧಿಕೃತ ಮನೆಗಳನ್ನು ಗುರುತಿಸಿ, ಮುಂಬರುವ ದಿನಗಳಲ್ಲಿ ಅವುಗಳಲ್ಲಿ ಯಾರೂ ವಾಸಿಸದಂತೆ  ನೋಡಿಕೊಳ್ಳುವ ಸಲುವಾಗಿ  ಅವುಗಳನ್ನು  ತೆರವುಗೊಳಿಸುವ  ನಿರ್ಧಾರವನ್ನು ಸಭೆಯಲ್ಲಿ ತಳೆಯಲಾಯಿತು.

ಸದಸ್ಯರ ಅಸಮಾಧಾನ-ಮಳೆಹಾನಿಯಿಂದ ಸಂಕಷ್ಟಕ್ಕೊಳಗಾದ ಮಂದಿಗೆ ಅಗತ್ಯ ನೆರವಿನೊಂದಿಗೆ, ಪರಿಹಾರ ಕಾರ್ಯಗಳನ್ನು ನಡೆಸಬೇಕಾಗಿದ್ದ ನಗರಸಭೆ ಸಂತ್ರಸ್ತರಿಗೆ ಪರಿಹಾರದ ಕಿಟ್‍ಗಳನ್ನು ವಿತರಿಸುವ ಹೊಣೆÉಯನ್ನು ವಹಿಸಿಕೊಂಡು, ಅದನ್ನು ಸಮರ್ಪಕವಾಗಿ ನಿಭಾಯಿಸದಿರುವ ಬಗ್ಗೆ ಸದಸ್ಯರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರಲ್ಲದೆ, ನಿರಾಶ್ರಿತರಿಗೆ ಒದಗಿಸುವ ತಾತ್ಕಾಲಿಕ ಶೆಡ್‍ನ ಗುಣಮಟ್ಟದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ.ಉಣ್ಣಿಕೃಷ್ಣ, ಸದಸ್ಯರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: