ಕರ್ನಾಟಕಪ್ರಮುಖ ಸುದ್ದಿಮೈಸೂರು

ಬಿಜೆಪಿಯವರು ಕೇಂದ್ರಕ್ಕೆ ಹೋಗಿ ಹಣ ಕೊಡಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ

ಬಿಜೆಪಿಯವರು ಇಲ್ಲಿ ಬರ ಅಧ್ಯಯನ ಮಾಡುವ ಬದಲು ಕೇಂದ್ರಕ್ಕೆ ತೆರಳಿ ಹಣ ಕೊಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರು ಇಲ್ಲಿ ಪ್ರವಾಸ ಮಾಡಿದರೆ ಯಾರೂ ಹಣ ನೀಡುವುದಿಲ್ಲ. ಹಣವನ್ನು ಕೇಂದ್ರಕ್ಕೆ ಹೋಗಿ  ಕೇಳಲಿ. ನಾವು ಅಕ್ಟೋಬರ್ ನಲ್ಲೇ ಬರ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಎರಡು ತಿಂಗಳು ಕಳೆದರೂ ಕೇಂದ್ರ ಹಣ ನೀಡಿಲ್ಲ. ಕೇಂದ್ರದಲ್ಲಿ ಮಾತನಾಡಿ ಹಣ ಕೊಡಿಸುವುದು ಬಿಟ್ಟು ಇಲ್ಲಿ ಯಾಕೆ ಪ್ರವಾಸ ಮಾಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಪ್ರಧಾನಿ ಮೋದಿ ಭೇಟಿಗೆ ಅವಕಾಶ ಕೇಳಿದ್ದೇವೆ. ಹಲವು ಪತ್ರಗಳನ್ನು ಬರೆದರೂ ಉತ್ತರ ಬಂದಿಲ್ಲ ಎಂದರು.

ಚಲನಚಿತ್ರನಟ ಚೇತನ್ ರಾಮ್ ರಾವ್ ನಿಧನದ ಕುರಿತು ಮಾತನಾಡಿದ ಅವರು, ಚೇತನ್ ರಾಮ್ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾಗಿದ್ದರು. 350 ಚಿತ್ರಗಳಲ್ಲಿ ನಟಿಸಿ ಜನರನ್ನು ರಂಜಿಸಿದ್ದರು. ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸರ್ಕಾರದಿಂದ ಅವರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆಯೂ ಹೇಳಿದ್ದೇನೆ. ಆಸ್ಪತ್ರೆಯ ಬಿಲ್ ಗಳನ್ನು ನೀಡಿದರೆ ಅದನ್ನು ಭರಿಸುವುದಕ್ಕೆ ಸರ್ಕಾರ ಸಿದ್ಧವಿದೆ. ಹಿಂದೆಯೂ ಒಂದು ಲಕ್ಷ ರೂ. ಹಣ ಸಹಾಯ ಮಾಡಿದ್ದೆವು ಎಂದರು. ನೀಟ್ ನಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡಿಲ್ಲ ಎಂಬ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ನೀಟ್ ಮುಖ್ಯಸ್ಥರ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕನ್ನಡ-ಇಂಗ್ಲಿಷ್ ಎರಡೂ ಬೇಕು ಎಂದು ಹೇಳಿದ್ದೇವೆ. ನಮ್ಮ ಅಧಿಕಾರಿಗಳು ಅವರ ಜೊತೆ ಇಂಗ್ಲಿಷ್ ಬೇಕು ಅಂತ ಹೇಳಿಲ್ಲ. ಕನ್ನಡ ಬೇಕು ಅಂತಲೇ ಹೇಳಿದ್ದಾರೆ. ಆದರೆ ಅನಂತಕುಮಾರ್ ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಇದೇ ಸಂದರ್ಭ ಮುಖ್ಯಮಂತ್ರಿಗಳು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಕಾಂಗ್ರೆಸ್ ನ ಕೆಲವು ಮುಖಂಡರು ಮುಖ್ಯಮಂತ್ರಿಗಳ ಜೊತೆಗಿದ್ದರು.

Leave a Reply

comments

Related Articles

error: