ಪ್ರಮುಖ ಸುದ್ದಿ

ಯುರೋಪ್ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ಹೊರಡಲಿದೆ ಶಾಸಕರ ತಂಡ

ರಾಜ್ಯ(ಬೆಂಗಳೂರು)ಸೆ.8:- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶ ಪ್ರವಾಸದ ಸಂದರ್ಭದಲ್ಲಿ ರಾಜ್ಯರಾಜಕಾರಣದಲ್ಲಿ ಆಘಾತಕಾರಿ ಬೆಳವಣಿಗೆಗಳು ನಡೆಯಲಿದೆ ಎಂಬ ಮಾತುಗಳಿಗೆ ಇಂಬು ಕೊಡುವಂತೆ ಕೆಲ ಕಾಂಗ್ರೆಸ್ ಶಾಸಕರು ಪ್ರತ್ಯೇಕ ತಂಡಗಳಲ್ಲಿ ಇನ್ನೆರಡು ಮೂರು ದಿನಗಳಲ್ಲಿ ವಿದೇಶ ಪ್ರವಾಸ ಕೈಗೊಳ್ಳುವ ಸುದ್ದಿಗಳು ಹೊರ ಬಿದ್ದಿದೆ.

ಶಾಸಕರ ಈ ವಿದೇಶ ಪ್ರವಾಸ ಸಮ್ಮಿಶ್ರ ಸರ್ಕಾರಕ್ಕೆ ಬಾಧಕವಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬಣಕ್ಕೆ ಸೋಲಾದರೆ ಸರ್ಕಾರದ ಭವಿಷ್ಯವನ್ನು ನಾವು ತೀರ್ಮಾನಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಸಹೋದರ ಸಚಿವ ರಮೇಶ್ ಜಾರಕಿಹೊಳಿ ಈಗಾಗಲೇ ಗುಡುಗಿದ್ದಾರೆ. ಹೀಗಾಗಿ, ರಾಜ್ಯರಾಜಕಾರಣ ಎತ್ತ ಸಾಗುತ್ತದೋ ಹೇಳಲು ಬಾರದು. ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಸಂಧಾನ ನಡೆದು ಲಕ್ಷ್ಮಿಹೆಬ್ಬಾಳ್ಕರ್ ಬಣವೇ ಮೇಲುಗೈ ಸಾಧಿಸಿದೆ. ಇದರಿಂದ ತಮ್ಮ ಪ್ರತಿಷ್ಠೆಗೆ ಕುಂದು ಉಂಟಾಗಿದೆ ಎಂದು ಜಾರಕಿಹೊಳಿ ಬ್ರದರ್ಸ್ ಭಾವಿಸಿದರೆ ಅದು ಸರ್ಕಾರಕ್ಕೆ ಕುತ್ತಾಗಬಹುದು.

ರಾಜ್ಯರಾಜಕೀಯದಲ್ಲಿ ನಾನಾ ವಿದ್ಯಮಾನಗಳು ನಡೆಯುತ್ತಿರುವ ಬೆನ್ನಲ್ಲೆ ಯುರೋಪ್ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಕಾಂಗ್ರೆಸ್‌ನ ಕೆಲ ಶಾಸಕರು ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿರುವುದು ಗುಟ್ಟೇನಲ್ಲ. ಕೆಲ ಶಾಸಕರು ಸಿದ್ದರಾಮಯ್ಯನವರ ಜೊತೆಯೇ ವಿದೇಶಕ್ಕೆ ತೆರಳಬೇಕಿತ್ತು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ನವರ ವಿದೇಶ ಪ್ರವಾಸದಿಂದ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಮನವಿಮಾಡಿದ್ದರು.

ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಜತೆ ಶಾಸಕರು ವಿದೇಶ ಪ್ರವಾಸ ಕೈಗೊಂಡಿರಲಿಲ್ಲ. ಈಗ ಮತ್ತೆ ಶಾಸಕರುಗಳು ವಿದೇಶಕ್ಕೆ ತೆರಳುತ್ತಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ವಿದೇಶದಲ್ಲಿ ಕುಳಿತೇ ಸಿದ್ದರಾಮಯ್ಯನವರು ರಾಜಕೀಯ ದಾಳ ಉರುಳಿಸಿ, ಸಮ್ಮಿಶ್ರ ಸರ್ಕಾರಕ್ಕೆ ಆಘಾತ ನೀಡುತ್ತಾರೆಯೇ ಎಂಬುದು ಈಗಿರುವ ಕುತೂಹಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: