ಮೈಸೂರು

ಸಮಾಜದಲ್ಲಿ ಎಲ್ಲರಿಗೂ ಕಾನೂನು ಬದ್ಧವಾಗಿ ರಕ್ಷಣೆ ಕೊಡುವ ಜವಾಬ್ದಾರಿ ಪೊಲೀಸರದ್ದು : ಐಜಿಪಿ ಕೆ.ವಿ.ಶರತ್ ಚಂದ್ರ

7ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

ಮೈಸೂರು,ಸೆ.8:- ಸಮಾಜದಲ್ಲಿ ಎಲ್ಲರಿಗೂ ಕಾನೂನು ಬದ್ಧವಾಗಿ ರಕ್ಷಣೆ ಕೊಡುವ ಜವಾಬ್ದಾರಿ ಪೊಲೀಸರದ್ದಾಗಿದ್ದು, ಪೊಲೀಸರು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ದಕ್ಷಿಣ ವಲಯ ಮಹಾ ನಿರೀಕ್ಷಕರಾದ ಕೆ.ವಿ.ಶರತ್ ಚಂದ್ರ ತಿಳಿಸಿದರು.

ಲಲಿತ ಮಹಲ್ ರಸ್ತೆಯ ಕೆ ಎಸ್ ಆರ್ ಪಿ 5ನೇ ಕವಾಯತು ಮೈದಾನದಲ್ಲಿ 7ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ,ಪ್ರಶಸ್ತಿ ವಿತರಿಸಿ ಮಾತನಾಡಿದರು. ಪೊಲೀಸರಿಗೆ ಜವಾಬ್ದಾರಿ ಹೆಚ್ಚಿದ್ದು, ಅವರು ಕಾನೂನು ಬದ್ಧವಾಗಿಯೇ ರಕ್ಷಣೆ ನೀಡಬೇಕು. ಸಂತೋಷದಿಂದ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಇಲಾಖೆಗೆ ಒಳ್ಳೆಯ ಹೆಸರು ತರಬೇಕು. ವೃತ್ತಿಯ ಘನತೆಯನ್ನು ಹೆಚ್ಚಿಸಬೇಕು ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇವರು ಆಯ್ಕೆ ಆಗಬೇಕಾದರೆ ಎರಡು ಪರೀಕ್ಷೆಗಳನ್ನು ಎದುರಿಸಿದ್ದಾರೆ‌. 8 ತಿಂಗಳ ತರಬೇತಿ ಮುಂದಿನ 35 ವರ್ಷಗಳ ಪೊಲೀಸ್ ವೃತ್ತಿಗೆ ಸಹಕಾರಿಯಾಗಲಿದೆ. ಇವರ ತರಬೇತಿಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹಕಾರ‌ ನೀಡಿದ್ದಾರೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.

ನಿಮ್ಮ ನಿರ್ಗಮನ ಪಥ ಸಂಚಲನ‌ ನೋಡಿ ನಿಮ್ಮ‌ ಕುಟುಂಬದವರು ಸಂತಸ ಪಟ್ಟಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದು ಇಲ್ಲಿ ತರಬೇತಿ ಪಡೆದಿದ್ದಾರೆ. ಸಶಸ್ತ್ರ ಪೊಲೀಸ್ ಪಡೆ ಕರ್ತವ್ಯ ಗಲಾಟೆ, ಗದ್ದಲಗಳನ್ನು ನಿಭಾಯಿಸುವುದಾಗಿದೆ. ನೀವು ಯಾವುದೆ ಕೆಲಸ ಮಾಡಿದರೂ ಕಾನೂನು ಅತಿಮುಖ್ಯ.ಸಶಸ್ತ್ರ ಪಡೆಗೆ ದೈಹಿಕ ಆರೋಗ್ಯ  ಮುಖ್ಯ.ನೀವುಗಳು ಆರೋಗ್ಯದ ಮೇಲೆ ಹೆಚ್ಚು ಒತ್ತು ಕೊಡಬೇಕು.ಶಿಸ್ತಿನ‌ ಇಲಾಖೆ ಇದು, ಶಿಸ್ತನ್ನು ಕಾಪಾಡಿಕೊಂಡು ಹೋಗಿ.ಶಿಸ್ತಿಲ್ಲದೆ ಇದ್ದರೆ ಗುರಿ ತಲುಪಲು ಆಗುವುದಿಲ್ಲ. ಈ ಇಲಾಖೆಗೆ ಬರುವವರು ಶಿಸ್ತು ಮತ್ತು ಆರೋಗ್ಯ ಕಾಪಾಡಿಕೊಂಡು ಬನ್ನಿ. ಪೊಲೀಸ್ ಇಲಾಖೆಯಲ್ಲಿ ಇದೇ ಕೆಲಸ ಅಂತ‌ ಇಲ್ಲ.ಎಲ್ಲಾ ಕೆಲಸಕ್ಕೂ ಸಿದ್ದರಾಗಿರಿ ಎಂದರು.

ಇದೇ ವೇಳೆ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಬಿ.ವಿ.ಎಸ್.ಕಿತ್ತೂರ್ ಪ್ರತಿಜ್ಞಾವಿಧಿ ಬೋಧಿಸಿದರು.

ಒಳಾಂಗಣ ಪ್ರಶಸ್ತಿಯಲ್ಲಿ ಅನಿಲ್ ಕುಮಾರ್ ಹೆಚ್. ಎನ್, ಬೆಂಗಳೂರು ನಗರ ಪ್ರಥಮ, ಜಯಣ್ಣ ಎ.ಪಿ, ದಾವಣಗೆರೆ ದ್ವಿತೀಯ, ಮಲ್ಲೇಶ ಭೀಮಪ್ಪ ತೇಲಿ ಬೆಂಗಳೂರು ನಗರ ದ್ವಿತೀಯ, ಬಾಬು ಜಿ.ಬಿ ಚಿಕ್ಕಬಳ್ಳಾಪುರ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಹೊರಾಂಗಣ ಪ್ರಶಸ್ತಿಯಲ್ಲಿ ಮುರುಘೇಂದ್ರ ಪಡಸಲಗಿ ಬೆಳಗಾವಿ ಪ್ರಥಮ, ಮಲ್ಲೇಶ ಭೀಮಪ್ಪ ತೇಲಿ ಬೆಂಗಳೂರು ನಗರ ದ್ವಿತೀಯ, ಸಿದ್ದಪಲ್ಲಯ್ಯ ಚಿತ್ರದುರ್ಗ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ರೈಫ್ ಶೂಟಿಂಗ್ ಪ್ರಶಸ್ತಿಯಲ್ಲಿ ಸಂಗನಗೌಡ ಭೀ ಪಾಟೀಲ ಬೆಂಗಳೂರು ನಗರ ಪ್ರಥಮ, ಮಾಳಪ್ಪ ಬೆಂಗಳೂರು ನಗರ ದ್ವಿತೀಯ, ವಿನೋದ್ ಕುಮಾರ್ ಬೆಂಗಳೂರು ನಗರ ತೃತೀಯ, ಗಿರೀಶ್ ಬಿ.ಆರ್ ಬೆಂಗಳೂರು ನಗರ ತೃತೀಯ, ಬಸವಶೆಟ್ಟಿ ಕೆ.ಮಡಿಕೇರಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಸರ್ವೋತ್ತಮ ಪ್ರಶಸ್ತಿಯನ್ನು ಮುರುಘೇಂದ್ರ ಪಡಸಲಗಿ ಬೆಳಗಾವಿ ಪಡೆದುಕೊಂಡಿದ್ದಾರೆ. ಡಿಜಿಪಿ,ತರಬೇತಿ ಪದನಾಮದ ಪುರಸ್ಕಾರ ಪ್ರಶಸ್ತಿಯನ್ನು ಸುರೇಶ್ ಐಹೊಳೆ ಬೆಳಗಾವಿ ಇವರು ಪಡೆದಿದ್ದಾರೆ.

ಎಂಟು ತಿಂಗಳ ಕಠಿಣ ತರಬೇತಿಯಲ್ಲಿ 18ಜನ ಸ್ನಾತಕೋತ್ತರ ಪದವೀಧರರು, 115ಮಂದಿ ಪದವೀಧರರು, 47ಪದವಿಪೂರ್ವ ಹಾಗೂ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ವಿವಿಧ ಜಿಲ್ಲೆಯ ಒಟ್ಟು 180ಮಂದಿಪ್ರಶಿಕ್ಷಣಾರ್ಥಿಗಳು ಇದ್ದರು.

ನಿರ್ಗಮನ ಪಥಸಂಚಲನದಲ್ಲಿ ಪ್ರಧಾನ ದಳಪತಿಯಾಗಿ ಆರ್ ಪಿಐ  ಎ.ಜಿ.ಅಶೋಕ್ ಕುಮಾರ್, ಸಹಾಯಕ ದಳಪತಿಯಾಗಿ ಆರ್ ಎಸ್ ಐ ಪ್ರಕಾಶ್, ಒಂದನೇ ತುಕಡಿಯ ನಾಯಕತ್ವವನ್ನು ಮುರುಘೇಂದ್ರ ಪಡಸಲಗಿ ಬೆಳಗಾವಿ, 2ನೇ ತುಕಡಿಯ ನಾಯಕತ್ವವನ್ನು ವಸಂತಕುಮಾರ್ ಹೆಚ್ ಕಲಬುರಗಿ, 3ನೇ ತುಕಡಿಯ ನಾಯಕತ್ವವನ್ನು ವಿಜಯ್ ಎಂ, 4ನೇ ತುಕಡಿಯ ನಾಯಕತ್ವವನ್ನು ಬಂಗಾರಶೆಟ್ಟಿ ಹೆಚ್.ಸಿ ಬೆಂಗಳೂರು ನಗರ, 5ನೇ ತುಕಡಿಯ ನಾಯಕತ್ವವನ್ನು ಕೋಮಲ್ ಪರಿಕ್ವಾಡ್ ಮಡಿಕೇರಿ,6ನೇ ತುಕಡಿಯ ನಾಯಕತ್ವವನ್ನು ವಿಜಯ್ ಆರ್ ಚಿತ್ರದುರ್ಗ, 7ನೇ ತುಕಡಿಯ ನಾಯಕತ್ವವನ್ನು ಸುರೇಸ್ ಐಹೊಳೆ ಬೆಳಗಾವಿ, 8ನೇ ತುಕೆಇಯ ನಾಯಕತ್ವವನ್ನು ಮಲ್ಲೇಶ ಭೀಮಪ್ಪ ತೇಲಿ ಬೆಂಗಳೂರು ನಗರ ವಹಿಸಿದ್ದರು.

ಪೊಲೀಸ್ ಆಯುಕ್ತರಾದ ಡಾ.ಎ.ಸುಬ್ರಮಣ್ಯೇಶ್ವರ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ಉಪ ಪೊಲೀಸ್ ಆಯುಕ್ತರು ವಿಷ್ಣುವರ್ಧನ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: