ಮೈಸೂರು

ಸಾಹಿತಿ ಮಾತ್ರವಲ್ಲದೇ ಚಿಂತಕರೂ ಕೂಡ ನಿರ್ಭಿಡೆಯಿಂದ ಅಭಿಪ್ರಾಯವನ್ನು ಹೇಳಲಾಗದ ಸಾಮಾಜಿಕ ವಾತಾವರಣದಲ್ಲಿ ನಾವಿದ್ದೇವೆ : ಡಾ.ಎಲ್ ಹನುಮಂತಯ್ಯ ಆತಂಕ

ಡಾ.ಅರವಿಂದ ಮಾಲಗತ್ತಿ ವಿರಚಿತ ‘ಚುಟುಕು ಚಿಂತನ ಮಾ ಕಾವ್ಯ ಮಂಥನ’ ಕೃತಿ ಲೋಕಾರ್ಪಣೆ

ಮೈಸೂರು,ಸೆ.8:- ಸಾಹಿತಿ ಮಾತ್ರವಲ್ಲದೇ ಚಿಂತಕರೂ ಕೂಡ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯವನ್ನು ಹೇಳಲಾಗದ ಸಾಮಾಜಿಕ ವಾತಾವರಣದಲ್ಲಿ ನಾವಿದ್ದೇವೆ ಎಂದು ರಾಜ್ಯ ಸಭಾ ಸದಸ್ಯ ಡಾ.ಎಲ್ ಹನುಮಂತಯ್ಯ ಆತಂಕ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ವೈದ್ಯ ವಾರ್ತಾ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಡಾ.ಅರವಿಂದ ಮಾಲಗತ್ತಿ ವಿರಚಿತ ‘ಚುಟುಕು ಚಿಂತನ ಮಾ ಕಾವ್ಯ ಮಂಥನ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಅನೇಕ ವರ್ಷಗಳಿಂದ ವಿವಿಧ ಪ್ರಕಾರಗಳಲ್ಲಿ ಸಮೃದ್ಧವಾದ ಬರವಣಿಗೆಯನ್ನು ನೀಡಿದಂತಹ ಸಾಹಿತ್ಯ. ಬಹುಶಃ ಭಾರತೀಯ ಭಾಷೆಗಳಲ್ಲಿ ಕನ್ನಡ ಸಾಹಿತ್ಯಕ್ಕಿರುವ ಮೌಲ್ಯಯುತವಾದ ಸ್ಥಾನ ಇತರೆಲ್ಲ ಭಾಷೆಗಳಿಗಿಂತ ದೊಡ್ಡದೆಂದು ನಾವು ಹೆಮ್ಮೆಪಟ್ಟುಕೊಳ್ಳಬಹುದಾದ ಸಂದರ್ಭದಲ್ಲಿದ್ದೇವೆ ಎಂದರು. ನಮಗೆ ಬೇರೆ ಬೇರೆ ಭಾಷೆಗಳ ಬಗೆಗಿರುವ ಅಲ್ಪ ಜ್ಞಾನವನ್ನು ತಿಳಿದು ಹೇಳುವುದಾದರೆ ಕನ್ನಡ ಸಾಹಿತ್ಯ ಭಾರತೀಯ ಭಾಷೆಗಳಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಕನ್ನಡದಲ್ಲಿ ಹಿರಿಯ ವಿದ್ವಾಂಸರು ಎಷ್ಟೊಂದು ಕಾಣಿಕೆಯನ್ನು ನೀಡಿದ್ದಾರೋ ಆ ಹಿರಿಮೆಯನ್ನು ಮುಂದುವರಿಸುವಂತೆ ಇಂದಿನ ಯುವ ತಲೆಮಾರು ಕೂಡ ಅಷ್ಟೇ ಆಸಕ್ತಿಯಿಂದ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುತ್ತಿರಕ್ಕಂತಹ ಸೃಜನಶೀಲತೆಯಲ್ಲಿ ಕೂಡ ಹಿಂದೆ ಬೀಳದೆ ಇರುವುದನ್ನು ನೋಡುತ್ತಿದ್ದೇವೆ ಎಂದರು. ಸಾಹಿತ್ಯ ಇಂದು ಅನೇಕ ರೀತಿಯ ಆತಂಕಗಳನ್ನು ಎದುರಿಸುತ್ತಿದೆ. ಕೇರಳದಲ್ಲಿ ಇತ್ತೀಚೆಗೆ ಒಂದು ಕೃತಿಯನ್ನು ನಿಷೇಧಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಗುತ್ತಿದೆ. ತಮಿಳಿನ ಕೃತಿಯೊಂದು ನಿಷೇಧಕ್ಕೆ ಒಳಗಾಗಿದೆ. ಕನ್ನಡದಲ್ಲಿ ಅಭಿಪ್ರಾಯ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವುದರ ಮೇಲೆ ಹಲ್ಲೆ ನಡೆದಿದೆ. ಇನ್ನೂ ಮುಖ್ಯ ಸಂಗತಿಯೆಂದರೆ ಸಾಹಿತಿ ಮಾತ್ರವಲ್ಲ, ಚಿಂತಕರೂ ಕೂಡ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯವನ್ನು ಹೇಳಲಾಗದ ಸಾಮಾಜಿಕ ವಾತಾವರಣದಲ್ಲಿ ನಾವಿದ್ದೇವೆ. ಇದು ನಿಜವೇ ಎಂದು ಪ್ರಶ್ನೆ ಮಾಡಿದರೆ ಕನ್ನಡದ ಸಂದರ್ಭ ಮಾತ್ರವಲ್ಲ. ಇಡೀ ಭಾರತೀಯ ಸಂದರ್ಭವೇ ವೈಚಾರಿಕ ಚಿಂತಕರಲ್ಲಿ ಪರ್ಯಾಯ ಚಿಂತಕರಿಗೆ ಬಹಳ ದೊಡ್ಡ ಆತಂಕವನ್ನುಂಟು ಮಾಡಿರುವ ಸಂದರ್ಭ ಅನಿಸುತ್ತಿದೆ ಎಂದರು. ಒಂದು ಕಾಲದಲ್ಲಿ ಪರ್ಯಾಯ ಚಿಂತನೆಯನ್ನು, ಭಿನ್ನ ಅಭಿಪ್ರಾಯಗಳನ್ನು ಪ್ರೀತಿಯಿಂದ ಸ್ವೀಕರಿಸುವ ವಾತಾವರಣವಿತ್ತು.  ನೆಹರು ಅವರನ್ನು ತೀಕ್ಷ್ಣವಾಗಿ ಟೀಕಿಸಿದ ಪ್ರಸಂಗವಿತ್ತು. ವಾಜಪೇಯಿಯವರು ಕೂಡ ತೀಕ್ಷ್ಣವಾಗಿ ಟೀಕಿಸಿದ್ದರು.  ಅರಸು ಅವರು ವಾಜಪೇಯಿಯವರನ್ನು  ಕರೆದು ಮೈದಡವಿ ಹರಿತ ಮಾತುಗಳನ್ನು ಮುಂದುವರಿಸಿ. ಮುಂದೊಂದು ದಿನ ಉತ್ತಮ ನಾಯಕರಾಗುತ್ತೀರಿ ಎಂದಿದ್ದರು. ಇವತ್ತು ಭಿನ್ನ ದೃಷ್ಟಿಕೋನ ಇರಿಸಿಕೊಂಡಿದ್ದಾರೆ ಎಂದರೆ ಅವರನ್ನು ಬಂಧಿಸಿ, ಗೃಹ ಬಂಧನದಲ್ಲಿರಿಸುವ ಅಘೋಷಿತ ತುರ್ತು ಪರಿಸ್ಥಿತಿಯ ವ್ಯವಸ್ಥೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇವತ್ತು ನಕ್ಸಲ್ ವಾದದಲ್ಲಿ ನಂಭಿಕೆ ಇರಿಸಿದ್ದೀರಿ ಎಂದಾದರೆ ಬಂಧಿಸುವ ವಾತಾವರಣವಿದೆ ಎಂದರೆ ನಾವು ಯಾವ ಪರಿಸ್ಥಿತಿಯಲ್ಲಿದ್ದೇವೆ ಎಂದು ಚಿಂತಿಸಬೇಕಾದ ಪರಿಸ್ಥಿತಿಯಿದೆ. ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ, ಧೈರ್ಯವಾಗಿ ಹೇಳಲಾಗದ ಪರಿಸ್ಥಿತಿಯಿದೆ ಎಂದರು. ಕನ್ನಡ ಕಾವ್ಯ ಪರಂಪರೆಯೇ ಹೆಮ್ಮೆ ಪಡುವ ಪರಂಪರೆ. ಮಾಲಗತ್ತಿಯವರ ಈ ಕೃತಿ ಕನ್ನಡದ ಯಾವುದಾದರೂ ವಿದ್ಯಾರ್ಥಿ ಅಧ್ಯಯನಕ್ಕಾಗಿ ಅಳವಡಿಸಿದರೆ ಯಾವುದೇ ವಿವಿ ಹೆಮ್ಮೆಯಿಂದ ಪಿಹೆಚ್ ಡಿ ನೀಡಬಹುದಾದ ಕೃತಿ ಎಂದರು. ಕನ್ನಡ ಚುಟುಕುಸಾಹಿತ್ಯದ ಮಹತ್ವವನ್ನು ರಾಮಾಯಣ ಮಹಾಭಾರತದಿಂದ ಆರಂಭಿಸಿ ವೇದ, ಉಪನಿಷತ್ತುಗಳಲ್ಲಿ ಇದು ಯಾವ ರೀತಿ ಕೆಲಸ ಮಾಡಿದೆ. ಕನ್ನಡದ ದೀರ್ಘ ಪರಂಪರೆಯಲ್ಲಿ ಚುಟುಕು ಸಾಹಿತ್ಯದ ಹಸ್ತ ಯಾವ ರೀತಿ ಇದೆ ಎಂಬುದನ್ನು ವಿವರಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ.ನೀಲಗಿರಿ ತಳವಾರ, ಕಸಾಅ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಸಂಘಟನಾ ಕಾರ್ಯದರ್ಶಿ ಎಂ.ಚಂದ್ರಶೇಖರ್, ವೈದ್ಯವಾರ್ತಾ ಸ್ಥಾಪಕ ನಿರ್ದೇಶಕ ಡಾ.ಎಂ.ಜಿ.ಅರಸ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಚಂದ್ರ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: