ಕರ್ನಾಟಕಪ್ರಮುಖ ಸುದ್ದಿ

ಮಂಡ್ಯದಿಂದ ಸ್ಪರ್ಧೆ ವದಂತಿಗೆ ಯದುವೀರ್ ಸ್ಪಷ್ಟನೆ: “ಜನಸೇವೆ ಮಾಡಲು ರಾಜಕೀಯವೇ ಆಗಬೇಕಿಲ್ಲ”

ಮೈಸೂರು (ಸೆ.8): ಬಿಜೆಪಿಯು ಮೈಸೂರು ರಾಜಮನೆತನದ ಮುಖ್ಯಸ್ಥರಾದ ಯದುವೀರ್ ಒಡೆಯರ್ ಅವರನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಯೋಜನೆ ರೂಪಿಸಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಸ್ವತಃ ಯದುವೀರ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡಿರುವ ಯದುವೀರ್ ಅವರು, ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ ಎಂಬುದು ಊಹಾಪೋಹವಷ್ಟೆ. ಜನಸೇವೆ ಮಾಡಲು ರಾಜಕೀಯವೇ ಆಗಬೇಕೆಂದೇನಿಲ್ಲ, ಹಲವು ದಾರಿಗಳಲ್ಲಿ ಜನಸೇವೆ ಮಾಡಬಹುದು ಎಂದಿದ್ದಾರೆ. ಈ ಮೂಲಕ ತಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದ ಬಿಜೆಪಿ, ಮೈಸೂರು ರಾಜಮನೆತನದ ಯದುವೀರ್ ಒಡೆಯರ್ ಅವರನ್ನೇ ಕಣಕ್ಕಿಳಿಸಲು ಮನವೊಲಿಸುವ ಪ್ರಯತ್ನ ಮಾಡಿತ್ತು ಎನ್ನಲಾಗಿದೆ.

ಪ್ರಧಾನಿ ಮೋದಿ ಮೈಸೂರಿಗೆ ಬಂದಿದ್ದಾಗ ಅರಮನೆಗೆ ಭೇಟಿ ನೀಡಿ ರಾಜಮನೆತನದವರನ್ನು ಭೇಟಿಯಾಗಿದ್ದರು. ಯದುವೀರ್ ಒಡೆಯರ್ ಕೂಡಾ ಹಿಂದೊಮ್ಮೆ ಮೋದಿಗೆ ಇನ್ನೊಂದು ಅವಕಾಶ ಸಿಗಬೇಕು ಎಂದಿದ್ದರು. ಹೀಗಾಗಿ ಯದುವೀರ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಿ ಆ ಕ್ಷೇತ್ರವನ್ನು ತನ್ನದಾಗಿಸಲು ಬಿಜೆಪಿ ತೆರೆಮರೆಯ ಯತ್ನ ನಡೆಸಿತ್ತು ಎಂಬ ವರದಿಗಳು ಪ್ರಕಟವಾಗಿದ್ದವು.

ಇಷ್ಟೇ ಅಲ್ಲ, ಯದುವೀರ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಬಿಜೆಪಿ ರಾಷ್ಟ್ರೀಯ ನಾಯಕರೂ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಆದರೆ ಈ ಎಲ್ಲ ಪ್ರಯತ್ನಗಳ ಕುರಿತು ಅಲ್ಲಗಳೆದಿರುವ ಯದುವೀರ್ ಒಡಯರ್ ಅವರು, ಜನಸೇವೆಗೆ ರಾಜಕೀಯವೇ ಆಗಬೇಕಿಲ್ಲ ಎನ್ನುವ ಮೂಲಕ ತಾವು ರಾಜಕೀಯದಿಂದ ದೂರ ಎಂಬ ಸಂದೇಶ ರವಾನಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: