ಮೈಸೂರು

ರೈತ ಸಂಘಟನೆಯಲ್ಲೂ ರಾಜಕೀಯ: ಪ್ರೊ.ಆರ್.ರಾಜಣ್ಣ ಬೇಸರ

ರೈತ ಸಂಘಟನೆಯಲ್ಲೂ ರಾಜಕೀಯ ಬೆರೆತು ಕಲುಷಿತಗೊಂಡಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್. ರಾಜಣ್ಣ ಬೇಸರ ವ್ಯಕ್ತ ಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ವಿದ್ಯಾರ್ಥಿ ಕ್ಷೇಮಪಾಲನಾ ಕಚೇರಿ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಇವರ ಸಹಯೋಗದಲ್ಲಿ, ಶನಿವಾರ ಮಾನಸಗಂಗೋತ್ರಿಯ ಇ.ಎಂ.ಆರ್.ಸಿ ಸಭಾಂಗಣದಲ್ಲಿ ನಡೆದ 2016-17ನೇ ಸಾಲಿನ ಸ್ನಾತಕಪೂರ್ವ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಹಕಾರ ಕುರಿತ ಕನ್ನಡ ಚರ್ಚಾಸ್ಪರ್ಧೆಯ ಉದ್ಘಾಟನೆಯನ್ನು ಪ್ರೊ.ಆರ್. ರಾಜಣ್ಣ ನೆರವೇರಿಸಿದರು.

ಬಳಿಕ  ಮಾತನಾಡಿದ ಅವರು, ಸಹಕಾರ ಕ್ಷೇತ್ರದ ಬಗ್ಗೆ ಚರ್ಚಾ ಸ್ಪರ್ಧೆ ಆಯೋಜನೆ ಮಾಡಿರುವುದು ತುಂಬಾ ಸಂತಸದ ವಿಷಯ. ಸಹಕಾರ ಮನೋಭಾವನೆ ತಿಳಿಸುವ ಬಗ್ಗೆ ಇವತ್ತಿನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯುವ ಆಕಾಂಕ್ಷೆ ಇದೆ. ವಸ್ತು ವಿನಿಮಯ ಮಾಡುವ ಸಮಯದಲ್ಲಿ ಹಸು ನಮಗೆ ಜೀವನಾಡಿಯಾಗಿತ್ತು. ಅನೇಕ ರೈತರು ಸಹಕಾರ ಸಂಘಗಳ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡರು. ಶ್ರೇಣೀಕೃತ ಸಂಘಗಳು ಹುಟ್ಟಿಕೊಂಡವಲ್ಲದೇ ಐಹೊಳೆ ಸಂಘಗಳು ನಿರ್ಮಾಣವಾದವು ಇವೆಲ್ಲ ಈಗ ಇತಿಹಾಸದ ಪುಟಗಳಲ್ಲಿ ಸೇರಿದೆ ಎಂದರು. ಆದರೆ ಈಗ ರೈತ ಸಂಘಗಳಲ್ಲೂ ರಾಜಕೀಯ ಹುಟ್ಟಿಕೊಂಡಿರುವುದು ಬೇಸರದ ಸಂಗತಿ ಎಂದರು.

ಪುಲಕೇಶಿಯ ಕಾಲದಿಂದ ಹಿಡಿದು, ಒಡೆಯರ್ ಕಾಲದವರೆಗೂ ಸಹಕಾರ ಕ್ಷೇತ್ರವನ್ನು ನಾವು ಕಾಣುತ್ತೇವೆ. ಆದರೆ ಜಾತಿಗೊಂದು ಸಹಕಾರ ಕ್ಷೇತ್ರ ಆಗಿರುವುದು ವಿಪರ್ಯಾಸ. ಇವತ್ತು ಯಾವ ಸಂಘದಲ್ಲಿಯೂ ಸಹಕಾರ ಮನೋಭಾವನೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಚಳುವಳಿಗಳು ಇವತ್ತು ಹಣ ಪಡೆದು ನಡೆಸುವ ಹಂತಕ್ಕೆ ತಲುಪಿರುವುದು ದುರಂತದ ಸಂಗತಿ. ಒಳ್ಳೆಯ ಮನೋಭಾವನೆ ಭಾವನೇಗಳೇ ಇಲ್ಲ. ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್ ಮಾತನಾಡಿ, ಕೊಡು-ಕೊಳ್ಳುವ ಸಹಕಾರವೇ ಇವತ್ತು ಸಹಕಾರ ಕ್ಷೇತ್ರದ ಬುನಾದಿ. ಇಲ್ಲಿ ಸ್ವಲ್ಪವಾದರೂ ಸಮಸ್ಯೆಯಾದರೆ, ನಂಬಿಕೆ ಕಳೆದುಕೊಂಡರೆ ಸಹಕಾರ ಕ್ಷೇತ್ರದಲ್ಲಿ ಸಮಸ್ಯೆ ಉಂಟಾಗಲಿದೆ. ಹಾಗಾಗಿ ಸಹಕಾರ ಕ್ಷೇತ್ರ ನಿಂತಿರೋದು ನಂಬಿಕೆಯ ಮೇಲೆಯೇ ಆಗಿದೆ ಎಂದರು.
ಯುವಕ-ಯುವತಿಯರ ಕೈಯಲ್ಲಿ ಇವತ್ತು ಸಹಕಾರ ಕ್ಷೇತ್ರ ನಿಂತಿದೆ. ಅವರು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಅರ್ಥಶಾಸ್ತ್ರ ಸಹಕಾರ ಅಧ್ಯಯನ ವಿಭಾಗದ  ಪ್ರೊ.ವಿಶ್ವನಾಥ್ ಮಾತನಾಡಿ ಸಹಕಾರದಲ್ಲಿ ಮಹಿಳೆಯರ ಪಾತ್ರ ತೀರ ಕುಸಿತ ಕಂಡಿದೆ. ಶೇ.9೦ ರಷ್ಟು ಪುರುಷರೇ ಹೆಚ್ಚಾಗಿ ಆವರಿಸಿಕೊಂಡಿದ್ದಾರೆ. ನಮ್ಮಲ್ಲಿ ನಾಯಕತ್ವದ ಕೊರತೆ ಇದೆ. ನಮಗೆ ನಿಸ್ವಾರ್ಥದಿಂದ ಕೆಲಸ ಮಾಡುವವರು ಬೇಕಾಗಿದ್ದಾರೆ. ಮಹಿಳೆಯರು ಹೆಚ್ಚಾಗಿ ಸಹಕಾರ ಕ್ಷೇತ್ರದಲ್ಲಿ ಮುಂದೆ ಬರಬೇಕಿದೆ. ಯುವ ಪೀಳಿಗೆಯೂ ಇದರಲ್ಲಿ ತೊಡಗಿಸಿಕೊಂಡರೆ ಸಹಕಾರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಡಾ.ಎಂ.ರುದ್ರಯ್ಯ, ಇಂದುಮತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: