ದೇಶಪ್ರಮುಖ ಸುದ್ದಿ

ಆಧಾರ್ ಪ್ರಾಧಿಕಾರದಿಂದ ಅಂತರ್ಜಾಲ ಬಳಕೆ ಮೇಲೆ ನಿಗಾ: ಸುಪ್ರೀಂ ಕೋರ್ಟ್‌ಗೆ ದೂರು

ನವದೆಹಲಿ (ಸೆ.8): ಅಂತರ್ಜಾಲ ಮತ್ತು ಇತರ ಮಾಧ್ಯಮಗಳಲ್ಲಿ ಆಧಾರ್‌ ಉಪಯೋಗಿಸಿ ನಡೆಸುವ ಚಟುವಟಿಕೆಗಳ ಮೇಲೆ ನಿಗಾ ಇರಿಸಲು “ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ – ಯುಐಡಿಎಐ” ಮುಂದಾಗಿದೆ ಎಂದು ದೂರಿ ತೃಣಮೂಲ ಕಾಂಗ್ರೆಸ್‌ ಶಾಸಕಿ ಮಹುವಾ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯ ವಿಚಾರಣೆಗೆ ನೆರವು ನೀಡುವಂತೆ ಅಟಾರ್ನಿ ಜನರಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಸಾಮಾಜಿಕ ಮಾಧ್ಯಮ ಕೇಂದ್ರವೊಂದನ್ನು ಸ್ಥಾಪಿಸಿ ಜನರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇತ್ತೀಚೆಗೆ ಮುಂದಾಗಿತ್ತು. ಅದಕ್ಕಾಗಿ ಟೆಂಡರ್‌ ಕೂಡ ಆಹ್ವಾನಿಸಲಾಗಿತ್ತು. ಆದರೆ, ನಂತರ ಅದನ್ನು ರದ್ದುಪಡಿಸಲಾಯಿತು.

ಯುಐಡಿಎಐ ಅದೇ ರೀತಿಯ ಟೆಂಡರ್‌ ಕರೆದಿದೆ. ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳ ಮೇಲೆ ನಿಗಾ ಇರಿಸುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ ಎಂದು ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹೇಳಿದರು.

ಈ ವ್ಯವಸ್ಥೆಯು ಜಾರಿಗೆ ಬಂದರೆ ಜನರ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳು ಯುಐಡಿಎಐಗೆ ತಿಳಿಯಲಿದೆ. ಇದು ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಸೆ.11ರಂದು ಮುಂದಿನ ವಿಚಾರಣೆ ನಡೆಯಲಿದೆ.

ಸಾಮಾಜಿಕ ಜಾಲತಾಣ ಚಟುವಟಿಕೆಗಳ ಮೇಲೆ ವಾರ್ತಾ ಸಚಿವಾಲಯವು ನಿಗಾ ಇರಿಸಲು ಮುಂದಾಗಿದ್ದರ ಬಗ್ಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ಇಂತಹ ಕ್ರಮಗಳು ಭಾರತವನ್ನು ಕಣ್ಗಾವಲು ದೇಶವಾಗಿ ಪರಿವರ್ತಿಸುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿತ್ತು. ಜನರ ವಾಟ್ಸ್‌ಆ್ಯಪ್‌ ಸಂದೇಶಗಳ ಮೇಲೆಯೂ ನಿಗಾ ಇರಿಸಲು ಸರ್ಕಾರ ಬಯಸಿದೆಯೇ ಎಂದು ಕೋರ್ಟ್‌ ಪ್ರಶ್ನೆ ಮಾಡಿತ್ತು. (ಎನ್.ಬಿ)

Leave a Reply

comments

Related Articles

error: