ಪ್ರಮುಖ ಸುದ್ದಿ

ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ತಾಲೂಕಿನ ಹಲವು ಪ್ರದೇಶಗಳ ವೀಕ್ಷಿಸಿದ ಸಂಸದ-ಶಾಸಕರು

ರಾಜ್ಯ(ಮಡಿಕೇರಿ)ಸೆ.8:-  ಭಾರೀ ಮಳೆ, ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ತಾಲೂಕಿನ ಗರ್ವಾಲೆ, ಹರಗ, ಬೆಟ್ಟದಳ್ಳಿ, ಶಾಂತಳ್ಳಿ, ಕೂತಿ ವ್ಯಾಪ್ತಿಯಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳು ಪರಿಶೀಲನೆ ನಡೆಸಿದರು.

ಪ್ರವಾಹದಿಂದ ಉಂಟಾಗಿರುವ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದರು, ಕೇಂದ್ರ ಸರ್ಕಾರದಿಂದ ಸಂತ್ರಸ್ಥರಿಗೆ ಅಗತ್ಯ ನೆರವು ಒದಗಿಸುವದಾಗಿ ಭರವಸೆಯಿತ್ತರು. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಎನ್‍ಡಿಆರ್‍ಎಫ್ ನಿಧಿಯಡಿ ತಕ್ಷಣಕ್ಕೆ 1ಲಕ್ಷ ಪರಿಹಾರ ಒದಗಿಸಲಾಗುವದು. ಈಗಾಗಲೇ ಮನೆ ಕಳೆದುಕೊಂಡವರಿಗೆ ಅವರು ಹೇಳುವ ಜಾಗದಲ್ಲೇ, ಸರ್ಕಾರ ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸುಮಾರು 7-10 ಲಕ್ಷ ವೆಚ್ಚದಲ್ಲಿ ನೂತನ ಮನೆ ನಿರ್ಮಿಸಿಕೊಡಲಾಗುವದು ಎಂದರು. ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಅವರ 8 ಕೋಟಿ ಅನುದಾನದೊಂದಿಗೆ ಸಂಸದರ ಅನುದಾನವನ್ನೂ ಸೇರಿಸಿ 10.50ಕೋಟಿ ಅನುದಾನವನ್ನು ಅತೀ ಹೆಚ್ಚು ಪ್ರವಾಹಪೀಡಿತವಾಗಿರುವ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿಗೆ ವಿನಿಯೋಗಿಸಲಾಗುವದು ಎಂದರು.

ಶಾಸಕ ಅಪ್ಪಚ್ಚು ರಂಜನ್ ಅವರ ಕೋರಿಕೆ ಮೇರೆಗೆ ಎಲ್ಲಾ ಶಾಸಕರ ನಿಧಿಯಿಂದ ತಲಾ 25ಲಕ್ಷ ಅನುದಾನ ಬರಲಿದೆ. ಇದರೊಂದಿಗೆ ಇನ್ಫೋಸಿಸ್, ಆರ್ಯವೈಶ್ಯ ಸಮಾಜ, ಕೊಡವ ಸಮಾಜ, ಬೆಂಗಳೂರು ರೋಟರಿ ಸೇರಿದಂತೆ ಇನ್ನಿತರ ಸಂಘಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಹಾನಿಗೊಳಗಾದ ಕೊಡಗನ್ನು ಪುನರ್ ನಿರ್ಮಾಣ ಮಾಡುವ ಕಾರ್ಯಕ್ಕೆ ಕೇಂದ್ರ ಸರ್ಕಾರವೂ ಅಗತ್ಯ ಸಹಕಾರ ನೀಡಲಿದೆ ಎಂದರು. ಕೊಡಗಿನ ನೆರವಿಗೆ ರಾಜ್ಯ ಸರ್ಕಾರ ಬರಬೇಕಿದೆ. ಇಲ್ಲಿನವರ 1400 ಕೋಟಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕಿದೆ. ಈಗಾಗಲೇ ಘೋಷಿಸಿರುವ 2ಲಕ್ಷದವರೆಗಿನ ಸಾಲಮನ್ನಾದಿಂದ ಕೊಡಗಿನ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೊಡಗಿನ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಸಂಸದರು ಆಗ್ರಹಿಸಿದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಮನೆ ಹಾಗೂ ಕೃಷಿ ನಷ್ಟದ ಬಗ್ಗೆ ವಾಸ್ತವ ವರದಿ ನೀಡುವಂತೆ ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರಿಗೆ ಸೂಚಿಸಲಾಗಿದೆ. ವಾಸಿಸಲು ಅಯೋಗ್ಯವಾದ ಮನೆಗಳನ್ನೂ ಸಹ ಸಂಪೂರ್ಣ ಹಾನಿ ಪ್ರಕರಣವೆಂದು ಪರಿಗಣಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ತೋಟಗಳನ್ನು ಕಳೆದುಕೊಂಡಿರುವ ಕೃಷಿಕರಿಗೆ ಸಿ ಮತ್ತು ಡಿ ಜಾಗದಲ್ಲಿ ಜಮೀನು ಒದಗಿಸಿಕೊಡುವ ಮೂಲಕ ಕೃಷಿಕರ ರಕ್ಷಣೆಯಾಗಬೇಕು ಎಂದು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮನವಿ ಮಾಡಿದರು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯ ಧರ್ಮಪ್ಪ, ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್, ಸದಸ್ಯ ತ್ರಿಶೂಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: