ಪ್ರಮುಖ ಸುದ್ದಿ

ಜೆಡಿಎಸ್-ಬಿಎಸ್‍ಪಿ ಪ್ರತಿಭಟನೆ : ಕೇಂದ್ರದ ಆರ್ಥಿಕ ನೀತಿಗೆ ಖಂಡನೆ

ಕೊಡಗಿನಲ್ಲಿ ಇರಲಿಲ್ಲ ಬಂದ್

ರಾಜ್ಯ(ಮಡಿಕೇರಿ) ಸೆ.10 :- ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಜಾತ್ಯಾತೀತ ಜನತಾದಳ ಮತ್ತು ಬಿಎಸ್‍ಪಿ ಪಕ್ಷಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಉಭಯ ಪಕ್ಷಗಳು ಕಾರ್ಯಕರ್ತರು ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದರು. ದೇಶದಲ್ಲಿ ಡೀಸೆಲ್ -ಪೆಟ್ರೋಲ್ ಹಾಗೂ ಅಡುಗೆ ಅನಿಲದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. 40ರೂ.ಗಳಷ್ಟಿದ್ದ ಡೀಸೆಲ್ ದರ ಇದೀಗ 74 ರೂ.ಗಳಿಗೆ ಹಾಗೂ 50 ರೂ.ಇದ್ದ ಪೆಟ್ರೋಲ್ ದರ 83ರೂ.ಗಳಿಗೆ ಏರಿಕೆಯಾಗಿದ್ದು, 450 ರೂ.ಗಳ ಅಡುಗೆ ಅನಿಲದ ದರ 850 ರೂ.ಗಳಿಗೆ ತಲುಪಿದೆ. ಇದರಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದ್ದು, ನಿತ್ಯೋಪಯೋಗಿ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ ಎಂದು ಜೆಡಿಎಸ್ ಮುಖಂಡ ಕೆ.ಎಂ.ಗಣೇಶ್ ಆರೋಪಿಸಿದರು. ಬೆಲೆ ಏರಿಕೆಯಿಂದಾಗಿ ದೇಶದ ಜನ ಬೇಸತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲಿದ್ದಾರೆ ಎಂದರು.

ಈಗಾಗಲೇ ಏರಿಕೆಯಾಗಿರುವ ಇಂಧನ ಬೆಲೆಯನ್ನು ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಇಳಿಸಬೇಕು ಎಂದು ಗಣೇಶ್ ಇದೇ ಸಂದರ್ಭ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಅಶ್ರಫ್, ಸುಖೇಶ್, ರವಿಕಿರಣ್, ಕರೀಂ, ಬಿಎಸ್‍ಪಿ ಪ್ರಮುಖರಾದ ಮೋಹನ್ ಮೌರ್ಯ, ಪ್ರೇಂಕುಮಾರ್, ರಫೀಕ್‍ಖಾನ್, ದಿಲೀಪ್, ಮಹಮ್ಮದ್ ಕುಂಞ ಮತ್ತಿತರರು ಪಾಲ್ಗೊಂಡಿದ್ದರು.

ಕೊಡಗಿನಲ್ಲಿ ಬಂದ್ ಇರಲಿಲ್ಲ

ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಭಾರತ ಬಂದ್‍ಗೆ ಕರೆ ನೀಡಿದ್ದವಾದರೂ ಕೊಡಗಿನಲ್ಲಿ ಬಂದ್ ಇರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್‍ಪಿ ಪಕ್ಷಗಳು ಪ್ರತಿಭಟನೆಯನ್ನಷ್ಟೇ ನಡೆಸಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆ ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವುದರಿಂದ ಪರಿಹಾರ ಕಾರ್ಯಗಳಿಗೆ ಮತ್ತು ಸಂತ್ರಸ್ತರಿಗೆ ಯಾವುದೇ ರೀತಿಯಲ್ಲಿ ಅಡಚಣೆಯಾಗಬಾರದು ಎನ್ನುವ ಕಾರಣಕ್ಕಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜೆಡಿಎಸ್ ಬಂದ್ ನಿರ್ಧಾರವನ್ನು ಕೈಬಿಟ್ಟಿದ್ದರು.

ಕೆಎಸ್‍ಆರ್‍ಟಿಸಿ ಬಸ್‍ಗಳು ಸೇರಿದಂತೆ ಎಲ್ಲಾ ವಾಹನಗಳ ಓಡಾಟ ಎಂದಿನಂತೆ ಇತ್ತು. ಶಾಲಾ ಕಾಲೇಜು, ಸರಕಾರಿ ಕಚೇರಿಗಳು, ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಂಗಡಿ, ಮುಂಗಟ್ಟು, ವಾಣಿಜ್ಯ ಸಂಕೀರ್ಣಗಳು ತೆರೆದಿದ್ದವು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: