ಮೈಸೂರು

ಶೌಚಾಲಯದಲ್ಲಿ ನೀರಿಲ್ಲದೆ ಪ್ರವಾಸಿಗರ ಪರದಾಟ; ಮೂಲಸೌಕರ್ಯ ಕೊರತೆ ಸರಿಪಡಿಸುವಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ

ಯಳದೂರು: ಇಲ್ಲಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾದ ಶೌಚಾಲಯವು ನಿರ್ವಹಣೆಯ ಕೊರತೆಯಿಂದ ದುರ್ನಾತ ಬೀರುತ್ತಿದೆ. ಪ್ರವಾಸಿಗರು ಪ್ರಕೃತಿಯ ಕರೆಗೆ ಓಗೊಡಲು ಸ್ಥಳವಿಲ್ಲದೆ ಪರದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ಹಚ್ಚ ಹಸಿರಿನ ವನರಾಶಿಯಿಂದ ಕಂಗೊಳಿಸುವ ಬಿಳಿಗಿರಿರಂಗನಬೆಟ್ಟದಲ್ಲಿ ದಾರಿಯುದ್ದಕ್ಕೂ ವನ್ಯಪ್ರಾಣಿಗಳು ಗಮನ ಸೆಳೆಯುತ್ತವೆ. ಪ್ರಕೃತಿ ಸೌಂದರ್ಯವನ್ನು ಸವಿಯುವ ಜೊತೆ ಬಿಳಿಗಿರಿ ರಂಗನಾಥಸ್ವಾಮಿ ದರ್ಶನ ಪಡೆಯಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಆಗಮಿಸುತ್ತಾರೆ.

ದೂರದ ಊರುಗಳಿಂದ ಬರುವ ಪ್ರವಾಸಿಗರು, ಭಕ್ತರಿಗೋಸ್ಕರ ಇಲ್ಲಿ ಶೌಚಾಲಯವೊಂದನ್ನು ನಿರ್ಮಿಸಲಾಗಿತ್ತು. ಆರಂಭದಲ್ಲಿ ಬಳಕೆಯಿದ್ದ ಶೌಚಾಲಯವೀಗ ನೀರಿನ ಅಭಾವ ಮತ್ತು ನಿರ್ವಹಣೆಯ ಕೊರತೆಯಿಂದ ನಾರುತ್ತಿದೆ. ಇದರಿಂದ ದೇಶ, ವಿದೇಶ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸುವ ಪ್ರವಾಸಿಗರಿಗೆ ಪ್ರಕೃತಿಯ ಕರೆಗೆ ಸ್ಪಂದಿಸಲು ಸಾಧ್ಯವಾಗದೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕರ ಕರವಸೂಲಾತಿ ಹಣದಿಂದ ಸರ್ಕಾರ ಈ ಶೌಚಾಲಯ ನಿರ್ಮಿಸಿದ್ದು, ದೇವಾಲಯದ ಆಡಳಿತ ಮಂಡಳಿಯಾಗಲೀ, ನಿರ್ಮಾಣದ ನಿರ್ವಹಣೆ ಹೊತ್ತಿರುವ ಸಂಸ್ಥೆಯಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಈ ಶೌಚಾಲಯ ಪಾಳು ಬಿದ್ದಿದೆ. ಪ್ರವಾಸಿಗರು ಅಲ್ಲಿಯೇ ಗಿಡ-ಮರ ಪೊದೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇಲ್ಲಿಗೆ ಬರುವ ಸ್ತ್ರೀಯರ ಪಡಿಪಾಟಲು ಹೇಳತೀರದು. ಇನ್ನಾದರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ತಮ್ಮ ನಿರ್ಲಕ್ಷ್ಯ ಮನೋಭಾವ ಬಿಟ್ಟು, ಇತ್ತ ಗಮನ ಹರಿಸಿ ಶೌಚಾಲಯಕ್ಕೆ ನೀರು ಪೂರೈಸಿ, ಸೂಕ್ತ ನಿರ್ವಹಣೆಯತ್ತ ಗಮನ ಹರಿಸಬೇಕಾಗಿದೆ.

 

ಖೋಟ್:

ಗಿರಿಮೇಲೆ ಇರುವ ಶೌಚಾಲಯ ನಿರ್ವಹಣೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ನಿರ್ವಹಣೆ ಮಾಡಬೇಕು. ಆದರೆ ಅವರು ಮಾಡುತ್ತಿಲ್ಲ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ನಾವು ತಾ.ಪಂ ಇಒ ಅವರ ಗಮನಕ್ಕೆ ತಂದಿದ್ದೇವೆ.

  • ಮಂಜುನಾಥ್ ಪಿಡಿಓ, ಬಿಳಿಗಿರಿರಂಗನಬೆಟ್ಟ ಗ್ರಾ.ಪಂ.

 

Leave a Reply

comments

Related Articles

error: