ಕರ್ನಾಟಕಪ್ರಮುಖ ಸುದ್ದಿಮೈಸೂರು

ಶಿಸ್ತು ಕ್ರಮ ಕೈಗೊಂಡರೂ ದೌರ್ಜನ್ಯಗಳು ನಿಲ್ಲುತ್ತಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ

ದೇಶದಲ್ಲಿ ಜಾತೀಯತೆ ಆಳವಾಗಿ ಬೇರೂರಿದೆ. ಅದನ್ನು ಅಷ್ಟು ಸುಲಭವಾಗಿ ಕಿತ್ತೊಗೆಯಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಕಾನೂನು ರೂಪಿಸಿ ಶಿಸ್ತು ಕ್ರಮ ಕೈಗೊಂಡರೂ ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಶನಿವಾರ ಅಂಬೇಡ್ಕರ್ ಪರಿನಿಬ್ಬಾಣದ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರಿನ ಜೆಕೆ ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಆಯೋಜಿಸಿದ್ದ ಬೌದ್ಧ ಸಮಾಜ ನಿರ್ಮಾಣ ಸಂಕಲ್ಪ ದಿನ ರಾಜ್ಯಮಟ್ಟದ ಸಮಾವೇಶವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ವಿಶ್ವಕಂಡ ಮಹಾನ್ ನಾಯಕ  ಹಾಗೂ ಮೇಧಾವಿ. ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಪ್ರಭುತ್ವ ಸಾಧಿಸಿದ್ದರು. ದೇಶದ ಜಾತೀಯ ವ್ಯವಸ್ಥೆಯ ಕುರಿತು ಅವರು ತಿಳಿದುಕೊಂಡಿದ್ದಷ್ಟು ಯಾರೂ ತಿಳಿದುಕೊಂಡಿರಲಿಲ್ಲ. ತಮ್ಮ ಕೊನೆ ಉಸಿರಿರುವವರೆಗೂ ಹಿಂದೂ ಧರ್ಮದ ಸುಧಾರಣೆಗೆ ಹೋರಾಡಿದರು. ಕೊನೆಗೆ ಸಫಲರಾಗದೆ ಜಾತೀಯ ವ್ಯವಸ್ಥೆಗೆ ಬೇಸತ್ತು ಬೌದ್ಧ ಧರ್ಮಕ್ಕೆ ಪರಿವರ್ತನೆಯಾದರು ಎಂದು ಹೇಳಿದರು.

ದೇಶ ಸ್ವಾತಂತ್ರ್ಯ ಕಂಡು ಇಷ್ಟು ವರ್ಷಗಳಾದರೂ ನಿಜವಾದ ಸ್ವಾತಂತ್ರ್ಯ ಇನ್ನೂ ದೊರೆತಿಲ್ಲ. ಕೇವಲ ಬದುಕುವ ಹಕ್ಕು ಲಭಿಸಿದರೆ ಸಾಲದು, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯವೂ ದೊರೆತಾಗ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಕಟ್ಟುಪಾಡುಗಳಿಂದ ಕೂಡಿ, ಅಮಾನವೀಯತೆಗೆ ಅವಕಾಶ ಮಾಡಿಕೊಡುವುದು ಧರ್ಮವಲ್ಲ. ಮಾನವೀಯತೆ, ಮನುಷ್ಯತ್ವ ಗುಣಗಳನ್ನು ಹೊಂದಿರುವುದೇ ನಿಜವಾದ ಧರ್ಮ. ಅಂತಹ ಗುಣಗಳನ್ನು ಬೌದ್ಧದರ್ಮದಲ್ಲಿ ಕಂಡ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿದರು. ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಅನೇಕ ಹೋರಾಟಗಳನ್ನು ಮಾಡಿದರು. ಅಂತರ್ಜಾತಿ ವಿವಾಹ ಹಾಗೂ ಸಹ ಪಂಕ್ತಿ ಭೋಜನವನ್ನು ಪ್ರೋತ್ಸಾಹಿಸಿದರು. ಸರ್ಕಾರ ಕೂಡ ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸುವ ಸಲುವಾಗಿ ದಲಿತ ಮಹಿಳೆಯನ್ನು ಮೇಲ್ವರ್ಗದ ಹುಡುಗ ಮದುವೆಯಾದರೆ 3 ಲಕ್ಷ ಹಾಗೂ ಮೇಲ್ವರ್ಗದ ಹುಡುಗಿ ದಲಿತ ಹುಡುಗನನ್ನು ವಿವಾಹವಾದರೆ 2 ಲಕ್ಷ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲರೂ ಹೇಳಿದ್ದು ಒಂದೇ. ಸಮಾಜದಲ್ಲಿನ ಜಾತೀಯತೆ ತೊಲಗಬೇಕು. ಆದರೆ ಸಾವಿರಾರು ವರ್ಷಗಳು ಕಳೆದರೂ ನಮ್ಮ ಸಮಾಜದ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಶಿಕ್ಷಿತ ಸಮುದಾಯದವರು ಅಂಬೇಡ್ಕರ್ ನಡೆದ ದಾರಿಯಲ್ಲಿ ಪ್ರಾಮಾಣಿಕಗಾಗಿ ಹೆಜ್ಜೆ ಹಾಕಿದಾಗ ಮಾತ್ರ ಬದಲಾವಣೆ ಸಾಧ್ಯ. ಜಾತಿ ಜಾತಿಗಳ ನಡುವೆ ಸಾಮರಸ್ಯ ಬೆಳೆದು ಸಮಾನತೆ ಮೂಡಬೇಕು. ಆರ್‍ಎಸ್‍ಎಸ್, ಬಿಜೆಪಿ, ಭಜರಂಗದಳ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದು ಅವರಿಂದ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ ಬಸವಣ್ಣ ಹಾಗೂ ಅಂಬೇಡ್ಕರ್ ಅನುಯಾಯಿಗಳು ಹಿಂದುತ್ವದ ಪ್ರತಿಪಾದಿಗಳನ್ನು ನಂಬಿ ಅವರೊಂದಿಗೆ ಹೋಗಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ,  ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, ಚೇತವನ ಬುದ್ಧವಿಹಾರದ ಮನೋರಖ್ಖಿತ ಭಂತೇಜಿ, ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಎಂಎಲ್‍ಸಿ ಆರ್.ಧರ್ಮಸೇನಾ ಮುಡಾ ಅಧ್ಯಕ್ಷ ಧ್ರುವಕುಮಾರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: