
ಕಾಡುಗಳ್ಳ ವೀರಪ್ಪನ್ ಆರಾಧ್ಯ ದೈವ ಹಾಗೂ ಪುರಾಣ ಪ್ರಸಿದ್ಧ ಪವಾಡ ಪುರುಷನ ದಿವ್ಯ ಸನ್ನಿಧಾನವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದೆರಡು ದಿನಗಳಿಂದ ನಾಲ್ಕು ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಹಾಗೂ ಭಕ್ತರಲ್ಲಿ ಭಯ, ಆತಂಕದ ಸೂತಕದ ಛಾಯೆ ಆವರಿಸಿದೆ.
ಕಳೆದ ಗುರುವಾರ ಬೆಟ್ಟದ ಮೇಲಿನ ಮರವೊಂದಕ್ಕೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು ಮೇಲ್ನೋಟಕ್ಕೆ ಇದು ಕೊಲೆಯೆಂಬ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ದೇವಸ್ಥಾನದ ಶಿವದರ್ಶಿನಿ ವಸತಿ ಗೃಹದಲ್ಲಿ, ಬೆಟ್ಟದ ಬಸ್ ನಿಲ್ದಾಣದ ಬಳಿ ಶ್ರೀರಂಗಪಟ್ಟಣ ತಾಲೂಕಿನ ಹೊಸಹಳ್ಳಿಯ ಪುಟ್ಟಚಾರಿ(70) ಎಂಬಾತ ಹೆಣವಾಗಿ ಪತ್ತೆಯಾಗಿದ್ದಾನೆ. ನಿನ್ನೆ ಸಂಜೆ ತಮಿಳುನಾಡು ಮೂಲದ ಚಿನ್ನಸ್ವಾಮಿ ಎಂಬ 70 ವರ್ಷದ ವಯೋವೃದ್ಧನ ಶವವೂ ಪಾಲಾರ್ ಮಾರ್ಗ ಮಧ್ಯೆ ಪತ್ತೆಯಾಗಿದೆ.
ಧನುರ್ಮಾಸ ಪ್ರಯುಕ್ತ ಬೆಟ್ಟಕ್ಕೆ ರಾಜ್ಯ ಸೇರಿದಂತೆ ತಮಿಳುನಾಡು ಕೇರಳದ ಭಕ್ತ ಸಾಗರವೇ ಹರಿದು ಬಂದಿದ್ದು, ಮೃತಪಟ್ಟ ನಾಲ್ಕು ಮಂದಿಯ ಶವಗಳು ಅನುಮಾನಾಸ್ಪದವಾಗಿಯೇ ಪತ್ತೆಯಾಗಿದ್ದು ತೀವ್ರ ಆತಂಕ ಸೃಷ್ಟಿಸಿದೆ. ಬೆಟ್ಟದಲ್ಲಿ ಭಕ್ತರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ ಭದ್ರತೆಯನ್ನು ಹೆಚ್ಚಿಸುವ ಅವಶ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.