ಮೈಸೂರು

ಧ್ವನಿಗಳ ಮೂಲಕ ಸುಮಾರು 20ಕ್ಕೂ ಹೆಚ್ಚು ಪಕ್ಷಿಗಳನ್ನು ಗುರುತಿಸಿದ ಅಂಧ ವಿದ್ಯಾರ್ಥಿಗಳು

ಮೈಸೂರು,ಸೆ.11-ಎನ್ ಆರ್ ಸಮೂಹದ ಚಾರಿಟಬಲ್ ಟ್ರಸ್ಟ್ ಎನ್ಆರ್ ಫೌಂಡೇಷನ್, ಸೈಕಲ್ ಪ್ಯೂರ್ ಅಗರಬತ್ತೀಸ್ ವತಿಯಿಂದ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯ ಮಕ್ಕಳಿಗಾಗಿ ಇತ್ತೀಚೆಗೆ ಕಾರಂಜಿ ಕೆರೆಗೆ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲೆಯ ಸುಮಾರು 35 ಅಂದ ವಿದ್ಯಾರ್ಥಿಗಳು ಪಕ್ಷಿಗಳ ವಿಶಿಷ್ಟ ಧ್ವನಿಗಳ ಮೂಲಕ ಅಲ್ಲಿನ ಪರಿಸರ ಸೌಂದರ್ಯವನ್ನು ಕಲ್ಪಿಸಿಕೊಂಡು ಸಂತೋಷಕರ ಅನುಭವ ಪಡೆದರು.

ಇದೇ ವೇಳೆ ಸ್ವಯಂಸೇವಕಿ ಸಹನಾ, ವಿದ್ಯಾರ್ಥಿಗಳಿಗೆ ಧ್ವನಿಗಳ ಮೂಲಕ ಪಕ್ಷಿಗಳನ್ನು ಗುರುತಿಸುವ ಕೌಶಲವನ್ನು ಕಲಿಸಿಕೊಟ್ಟರು. ಈ ಬಗ್ಗೆ ಮಾತನಾಡಿದ ಅವರು, ವಿವಿಧ ಪಕ್ಷಿಗಳ ಧ್ವನಿಗಳನ್ನು ಕೇಳಿದಾಗ ವಿದ್ಯಾರ್ಥಿಗಳ ಕುತೂಹಲ ಹೆಚ್ಚುತ್ತಿತ್ತು. ನಮ್ಮ ಸ್ವಯಂ ಸೇವಕರಾದ ಹರ್ಷ ಮತ್ತು ನವ್ಯ ವಿವಿಧ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಅವುಗಳನ್ನು ಹೇಗೆ ಅವುಗಳ ಧ್ವನಿಗಳ ಮೂಲಕ ಗುರುತಿಸಬಹುದು ಎನ್ನುವುದನ್ನು ತಿಳಿಸಿಕೊಟ್ಟರು.

ಹಿಂದಿನ ದಿನವೇ ಶಾಲೆಯ ಆವರಣದಲ್ಲಿ ಸುಮಾರು 30 ಪಕ್ಷಿಗಳ ಧ್ವನಿಗಳನ್ನು ಅವರಿಗೆ ರೆಕಾರ್ಡಿಂಗ್ ಮೂಲಕ ಪರಿಚಯ ಮಾಡಿಕೊಡಲಾಗಿತ್ತು ಮತ್ತು ಅವರು ಈ ಭೇಟಿಯ ವೇಳೆ ಬೂದು ಮುಂಗಟ್ಟೆ, ಬಿಳಿ ಕೆನ್ನೆಯ ಬಾರ್ಬೆಟ್, ಏಷ್ಯನ್ ಕೋಯಲ್, ಸಾಮಾನ್ಯ ಗೊರವಂಕ ಮತ್ತು ಭಾರತೀಯ ನವಿಲು ಸೇರಿದಂತೆ ಸುಮಾರು 20 ಪಕ್ಷಿಗಳ ದನಿಗಳನ್ನು ಗುರುತಿಸಿದರು. ಈ ವಿಶಿಷ್ಟ ಅನುಭವದ ಮೂಲಕ ಮಕ್ಕಳು ಪರಸ್ಪರ ಸಂತಸ ಹಂಚಿಕೊಂಡರು ಎಂದು ಸಹನಾ ಹೇಳಿದರು.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಗಾಯತ್ರಿ ಮಾತನಾಡಿ, ಇದು ನನಗೆ ಮತ್ತು ನನ್ನ ಇತರ ಸಹಪಾಠಿಗಳಿಗೆ ಒಂದು ಸ್ಮರಣೀಯ ಕಲಿಕೆಯ ಅನುಭವ. ನಾವು ಇದನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಎಂದು ಹೇಳಿದರು.

ಎನ್ಆರ್ ಸಮೂಹದ ಅಧ್ಯಕ್ಷ ಗುರು ಮಾತನಾಡಿ, ಯಾವಾಗಲೂ ನಾವು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತ ಬಂದಿದ್ದೇವೆ. ಈ ಉಪಕ್ರಮವೂ ಸಹ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಒಂದು ಭಾಗವಾಗಿಯೇ ಕೈಗೆತ್ತಿಕೊಂಡಿದ್ದೇವೆ. ಇದು ಮಕ್ಕಳ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಯ ಕಡೆಗೆ ನಮಗಿರುವ ಬದ್ಧತೆಯ ಒಂದು ಭಾಗವಾಗಿದೆ. ಇದೊಂದು ಅಸಾಂಪ್ರದಾಯಿಕ ಪ್ರಾರಂಭಿಕ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಚನೆ ಇದೆ ಎಂದರು.

ಪಕ್ಷಿ ವೀಕ್ಷಣೆ ಹೊರಾಂಗಣ ಚಟುವಟಿಕೆಯ ಒಂದು ಜನಪ್ರಿಯ ರೂಪವಾಗಿದೆ. ಆದಾಗ್ಯೂ, ಪಕ್ಷಿ ವೀಕ್ಷಣೆ ಒಂದೇ ಈ ಭೇಟಿಯ ಉದ್ದೇಶವಾದರೆ, ಪಕ್ಷಿ ಕರೆ ಮತ್ತು ಅವುಗಳ ಇಂಪಾದ ದನಿಗಳ ಮಾಹಿತಿಯ ಶ್ರೀಮಂತಿಕೆ ಕೈತಪ್ಪಿದಂತಾಗುತ್ತದೆ. ಇದು ನಮ್ಮ ಅಂಧ ವಿದ್ಯಾರ್ಥಿಗಳಿಗೆ ಶ್ರವಣದ ಮೂಲಕ ಪಕ್ಷಿಗಳ ದನಿಗಳನ್ನು ಕೇಳುವ ಮತ್ತು ಅವುಗಳ ದನಿಗಳ ಮೂಲಕ ಆಯಾ ಪಕ್ಷಿಗಳನ್ನು ಗುರುತಿಸುವ ಒಂದು ಸಂತೋಷಕರ ಮತ್ತು ತೃಪ್ತಿಕರ ಮಾರ್ಗವಾಗಿತ್ತು. ಈ ಅನುಭವ ಅವರಿಗೆ ಪಕ್ಷಿಗಳ ವೈವಿಧ್ಯತೆಯ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿತು. ಇದು ಒಂದು ಆರ್ನಿಥಾಲಜಿ ವಿಜ್ಞಾನವಾಗಿದ್ದು, ಕೇಳುವಿಕೆಯ ರೂಪವನ್ನು ಆಧರಿಸಿದೆ. ಸಾಮಾನ್ಯವಾಗಿ ಹವ್ಯಾಸಿಗಳು ಮತ್ತು ವೃತ್ತಿಪರರು ಪಕ್ಷಿಗಳ ವಿಶಿಷ್ಟ ಧ್ವನಿ ಗುರುತಿಸಲು ಈ ವಿಜ್ಞಾನವನ್ನು ಬಳಸುತ್ತಾರೆ ಎಂದು ಹೇಳಿದರು. (ಎಂ.ಎನ್)

 

Leave a Reply

comments

Related Articles

error: