ಮೈಸೂರು

ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಅಗತ್ಯವಿರುವ ದೂರಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ತಾಕೀತು

ಮೈಸೂರು, ಸೆ. 11:- ಮಳೆ ಹಾಗೂ ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಅಗತ್ಯವಿರುವ ದೂರಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಭಾರತ್ ಸಂಚಾರ ನಿಗಮ (ಬಿಎಸ್‍ಎನ್‍ಎಲ್) ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ತಾಕೀತು ಮಾಡಿದರು.

ನಗರದ ಟಿ.ಕೆ. ಬಡಾವಣೆಯಲ್ಲಿರುವ ರಿಜನಲ್ ಟೆಲಿಕಾಂ ಟ್ರೈನಿಂಗ್ ಸೆಂಟರ್‍ನಲ್ಲಿ ಮಂಗಳವಾರ ನಡೆದ ದೂರಸಂಪರ್ಕ ನಿಗಮದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಸಂಭವಿಸಿದ ಮಳೆ ಹಾಗೂ ಪ್ರವಾಹದಿಂದ ಅಲ್ಲಿನ ಅನೇಕ ಗ್ರಾಮಗಳು ಸಂವಹನ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿನ ಜನರಿಗೆ ಮೊಬೈಲ್ ಸೇವೆಯೂ ಇಲ್ಲದಂತಾಗಿದ್ದು, ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದೆ. ಕೆಲವು ಖಾಸಗಿ ದೂರಸಂಪರ್ಕ ಸಂಸ್ಥೆಗಳು ಕೊಡಗಿನಲ್ಲಿ ಉತ್ತಮ ಸೇವೆ ನೀಡುತ್ತಿದ್ದು, ಬಿಎಸ್‍ಎನ್‍ಎಲ್ ಮಾತ್ರ ಪರಿಣಾಮಕಾರಿ ಸೇವೆ ನೀಡಲು ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಸಂದರ್ಭದಲ್ಲಿ ಖಾಸಗಿ ದೂರ ಸಂಕರ್ಪ ಸಂಸ್ಥೆಗಳ ಉತ್ತಮ ಸೇವೆಯಿಂದ ನಗರ ಪ್ರದೇಶಗಳಲ್ಲಿ ಯಾರೊಬ್ಬರೂ ಬಿಎಸ್‍ಎನ್‍ಎಲ್ ಮೊಬೈಲ್ ಸೇವೆಯನ್ನು ಬಳಸುತ್ತಿಲ್ಲ. ಹೀಗಾಗಿ ಕನಿಷ್ಠ ಕೊಡಗು ಜಿಲ್ಲೆಯ ಹಲವು ಗ್ರಾಮಗಳು, ಕಾಡಂಚಿನ ಭಾಗಗಳಲ್ಲಿ ಹೆಚ್ಚಿನ ಟವರ್‍ಗಳನ್ನು ಅಳವಡಿಸಿ, ಅಲ್ಲಿನ ಜನರಿಗೆ ಸಂವಹನಕ್ಕೆ ಅವಕಾಶ ಕಲ್ಪಿಸಬೇಕಿದೆ. ಇದಕ್ಕಾಗಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಟವರ್‍ಗಳನ್ನು ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಸಂಸದ ಆರ್. ಧ್ರುವನಾರಾಯಣ್, ಮೈಸೂರು ದೂರ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ.ಎಲ್. ಜಯರಾಂ ಇನ್ನಿತರರು ಹಾಜರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: