ಮೈಸೂರು

ಸೆ. 15 – 16 :  ನಟನ ರಂಗಶಾಲೆಯಲ್ಲಿ ‘ಪಾಪು ಗಾಂಧಿ, ಗಾಂಧಿ ಬಾಪು ಆದಕಥೆ’ ಮತ್ತು ‘ಧಾಂಧೂಂ ಸುಂಟರಗಾಳಿ’

ಮೈಸೂರು,ಸೆ.11:- ಮಂಡ್ಯರಮೇಶ್  ಸ್ಥಾಪಕತ್ವದ  ವಾರಾಂತ್ಯರಂಗ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದು, ಸೆಪ್ಟಂಬರ್ 15ರಂದು ಸಂಜೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗ ಶಾಲೆಯಲ್ಲಿ ಗಾಂಧಿ 150 ಒಂದುರಂಗ ಪಯಣ, ಕನ್ನಡ ಸಂಸ್ಕೃತಿ ಇಲಾಖೆ ಅವರು ಪ್ರಸ್ತುತ ಪಡಿಸುವ ಬೊಳುವಾರು ಮಹಮ್ಮದ್‍ಕುಂಞ ಅವರ‘ಪಾಪು ಗಾಂಧಿ, ಗಾಂಧಿ ಬಾಪು ಆದಕಥೆ’ಆಧರಿಸಿದ ರಂಗರೂಪಕ ಪ್ರದರ್ಶನಗೊಳ್ಳಲಿದ್ದು, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್‍ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿದೆ. ಈ ಪ್ರಸ್ತುತಿಯ ರಂಗರೂಪ ಮತ್ತು ನಿರ್ದೇಶನ ಕನ್ನಡದ ಹೆಸರಾಂತ ನಿರ್ದೇಶಕರಾದ ಡಾ. ಶ್ರೀಪಾದ ಭಟ್‍ ಅವರದ್ದು. ಮಹಾತ್ಮಾಗಾಂಧೀಜಿ ರಾಷ್ಟ್ರಪಿತ ಆಗಿದ್ದು ಹೇಗೆ ಎಂಬುದೂ ಒಳಗೊಂಡಂತೆ ಗಾಂಧೀಜಿಯವರ ಜೀವನದ ಪ್ರಮುಖ ಘಟ್ಟಗಳನ್ನು ಜನರ ಮುಂದೆ ತೆರೆದಿಡುವ ಪ್ರಯತ್ನವನ್ನು ಈ ನಾಟಕ ಮಾಡಿದೆ. ಬಾಪು ಹತ್ಯೆಯ ದೃಶ್ಯದೊಂದಿಗೆ ನಾಟಕ ಮುಗಿಯುವ ಮೊದಲು, ‘ಗಾಂಧಿ’ ಹಾಕಿಕೊಟ್ಟ ಆದರ್ಶವನ್ನು ಕೊನೆಗಾಣಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಆಶಯವನ್ನು ನಾಟಕ ತಂಡ ಗಟ್ಟಿ ದನಿಯಲ್ಲಿ ಸಾರುತ್ತದೆ. ಮಕ್ಕಳು ಮತ್ತು ಯುವ ಜನತೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ನಾಟಕ, ಗಾಂಧೀಜಿ ಚರಿತ್ರೆಯನ್ನು ಒಂದು ತಾಸಿನಲ್ಲಿ ಸೂಕ್ಷ್ಮವಾಗಿ ಹೇಳುತ್ತದೆ.

ಸೆಪ್ಟಂಬರ್ 16ರಂದು ಸಂಜೆ 6.30ಕ್ಕೆ ಸರಿಯಾಗಿ, ಶೇಕ್ಸ್‍ಪಿಯರ್‍ನ‘ದಿ ಟೆಂಪೆಸ್ಟ್’ಆಧಾರಿತ, ಕನ್ನಡದ ಶ್ರೇಷ್ಠ ಕತೆಗಾರ್ತಿ ವೈದೇಹಿಯವರು ರೂಪಾಂತರಿಸಿದ‘ಧಾಂಧೂಂ ಸುಂಟರಗಾಳಿ’ ಎಂಬ ನಾಟಕ  ಜೀವನ್‍ರಾಂ ಸುಳ್ಯಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪ್ರಗತಿಯ ಹೆಸರಿನಲ್ಲಿ, ಆಧುನಿಕ ಸೌಲಭ್ಯಗಳನ್ನುಸೃಷ್ಠಿಸುವ ಭರಾಟೆಯಲ್ಲಿ ಮಾನವೀಯ ಗುಣಗಳನ್ನು ಮಣ್ಣುಪಾಲು ಮಾಡಿರುವ ವಿದ್ಯಾವಂತರ ಮುಖವಾಡ ತೊಟ್ಟ ರಾಜಕೀಯ ಅಧಿಕಾರಸ್ತರೆಂಬ ಅಮಾನುಷ ಮುಖಗಳ ಅನಾವರಣ ಈ ‘ಸುಂಟರಗಾಳಿ’.ಭೂಮಿ ಪ್ರೀತಿಯ ಅವಶ್ಯಕತೆಯನ್ನು ಒತ್ತಿ ಹೇಳುವ ವಸ್ತುವನ್ನು ಸರಳವಾಗಿ ಪುಟ್ಟ ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ಹೇಳುವ ಪ್ರಯತ್ನವಿದು. ಮಕ್ಕಳಿಗೆ ಇಷ್ಟವಾಗುವ ತಮಾಷೆ, ಅತಿರಂಜಕತೆ, ಸಂಗೀತ, ಮಾಯಾ-ಮಂತ್ರ, ವರ್ಣಮಯತೆಯ ದೃಶ್ಯ  ವೈಭವಗಳಲ್ಲಿ ‘ಶೇಕ್ಸ್‍ಪಿಯರ್’ನನ್ನು ಸರಳವಾಗಿ ಕನ್ನಡದಲ್ಲಿ ಹಿಡಿದಿಡುವ ಸಂಕಲ್ಪ ವಿದಾಗಿದೆ. (ಜಿ.ಕೆ.ಎಸ್,ಎಸ್.ಎಚ್)

Leave a Reply

comments

Related Articles

error: