ಪ್ರಮುಖ ಸುದ್ದಿಮೈಸೂರು

ಮೈಸೂರಿನ ಗ್ರಾಹಕರಿಗೆ ವಿಷಮುಕ್ತ ಧಾನ್ಯ, ತರಕಾರಿ; ಪ್ರತಿ ಭಾನುವಾರ ಅಮೃತಭೂಮಿ ರೈತರಿಂದ ಮಾರಾಟ

ಅಮೃತಭೂಮಿ ಅಂತಾರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರವು ಚಾಮರಾಜನಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಯಾವುದೇ ರಾಸಾಯನಿಕ ವಿಷ ಬಳಸದೆ ನೈಸರ್ಗಿಕವಾಗಿ ಬೆಳೆದಿರುವ ಉತ್ಪನ್ನಗಳನ್ನು ಮೈಸೂರಿನ ಗ್ರಾಹಕರಿಗೆ ನೇರ ಮಾರಾಟ ಮಾಡಲು ಅಮೃತಭೂಮಿಯ ಯುವ ರೈತರು ತೀರ್ಮಾನಿಸಿದ್ದಾರೆ.

ಡಿಸೆಂಬರ್ 25, ಭಾನುವಾರದಿಂದ ಪ್ರಾರಂಭ ಮಾಡಿ ಪ್ರತಿ ಭಾನುವಾರ ಬೆಳಗ್ಗೆ 7 ರಿಂದ 10 ಗಂಟೆ ವರೆಗೆ ಕುಕ್ಕರಹಳ್ಳಿ ಕೆರೆಯ ಮುಖ್ಯದ್ವಾರದಲ್ಲಿ ಮಾರಾಟ ಮಾಡಲಾಗುವುದು.

ಈ ವರ್ಷದ ಭೀಕರ ಬರಗಾಲದ ನಡುವೆಯೂ ಪದ್ಮಶ್ರೀ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸಿ ಹಾಸನ ಜಿಲ್ಲೆಯ ಉತ್ಸಾಹಿ ಯುವರೈತ ನವೀನ್ ಕುಮಾರ್ ಬಿ.ಐ. ಅವರು ಬೆಳೆದಿರುವ ಏಲಕ್ಕಿ ಬಾಳೆ ಮತ್ತು ಬಾಳೆದಿಂಡು, ಜ್ಯೋತಿಗೌಡನಪುರ ಗ್ರಾಮದ ಯುವ ರೈತ ರಘುರವರು ಹಾಗೂ ಹೊಂಡರಬಾಳು ಗ್ರಾಮದ ಮಲ್ಲಿಕಾರ್ಜುನ್‍ರವರು ಬೆಳೆದಿರುವ ತೊಗರಿಬೇಳೆ, ಹೊಂಡರಬಾಳು ಗ್ರಾಮದ ಮುತ್ತೇಗೌಡ ಹಾಗೂ ರಘು ಅವರು ಬೆಳೆದಿರುವ ರಾಗಿಯ ಉಪಉತ್ಪನ್ನಗಳಾದ ರಾಗಿಹಿಟ್ಟು, ಮೊಳಕೆ ಕಟ್ಟಿದ ರಾಗಿಹಿಟ್ಟು ಮತ್ತು ರಾಗಿ ಹಪ್ಪಳ, ಹೊಸಮಾಲಂಗಿ ಗ್ರಾಮದ ಮತ್ತೊಬ್ಬ ಯುವರೈತ ಅಭಿಲಾಷ್‍ರವರು ಬೆಳೆದಿರುವ ಸಂಧಿವಾತಕ್ಕೆ ಔಷಧಿಯಾಗಿ ಉಪಯೋಗಿಸಬಹುದಾದ ನವರಕೆಂಪಕ್ಕಿ, ನವರಕೆಂಪಕ್ಕಿ ಹಿಟ್ಟು ಮತ್ತು ನವರ ಅಕ್ಕಿಯ ಹಪ್ಪಳ, ಸರ್ವಸಾಂಬಾರ್ (ಅಲ್ಪೈಸ್‍ ಎಲೆ), ದನಿಯಾಪುಡಿ, ಸೊಪ್ಪುಗಳು ಹಾಗೂ ನೈಸರ್ಗಿಕ ಕೃಷಿ, ಸಾವಯವ ಕೃಷಿ ಮತ್ತು ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಕುರಿತಂತೆ ಪುಸ್ತಕಗಳು ದೊರೆಯುತ್ತವೆ.

ಕೃಷಿಯಿಂದ ವಿಮುಖಗೊಳ್ಳುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿರುವ ಈ ಸಮಯದಲ್ಲಿ ಭೂಮಿ, ಒಕ್ಕಲುತನ ಮತ್ತು ನಿಸರ್ಗವನ್ನು ಜೋಪಾನ ಮಾಡುತ್ತಿರುವ ಈ ಯುವಕರು ಮುಂದಿನ ಪೀಳಿಗೆಯ ದಾರಿ ದೀಪಗಳು.

ರಾಸಾಯನಿಕ ಕೃಷಿಯಿಂದ ಎದುರಾಗಿರುವ ಸಮಸ್ಯೆಗಳು, ಮುಕ್ತ ಆರ್ಥಿಕ ನೀತಿಯಿಂದ ಹಾನಿಗೊಳಗಾಗಿರುವ ದೇಸಿ ಕೃಷಿ ಮಾರುಕಟ್ಟೆ – ಇದೆಲ್ಲದರ ಪರಿಣಾಮವಾಗಿ ಹೆಚ್ಚುತ್ತಿರುವ ಸಾಲ, ಆತ್ಮಹತ್ಯೆ ದಾರಿ ಹಿಡಿಯುತ್ತಿರುವ ರೈತ ಸಮುದಾಯ – ಇಂತಹ ಅನೇಕ ಸವಾಲುಗಳಿಗೆ ಉತ್ತರದ ಹುಡುಕಾಟದಲ್ಲಿರುವ ಅಮೃತಭೂಮಿಯ ಯುವ ರೈತ ಪಡೆ, ಅಮೃತಭೂಮಿಯ ಸಂಸ್ಥಾಪಕರಾದ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಆಶಯದಂತೆ ಒಂದು ಪರ್ಯಾಯ, ಸ್ವಾವಲಂಬಿ, ಮಾದರಿ ವ್ಯವಸ್ಥೆಯನ್ನು ಕಟ್ಟುವ ಪ್ರಯತ್ನದಲ್ಲಿದೆ. ಮೈಸೂರಿನ ನಾಗರಿಕರು ಇದರ ಸದುಪಯೋಗ ಪಡೆದು ಆರೋಗ್ಯಕರ ಧಾನ್ಯ, ತರಕಾರಿಗಳನ್ನು ಸವಿಯಬಹುದಾಗಿದೆ.

Leave a Reply

comments

Related Articles

error: