ಕರ್ನಾಟಕಪ್ರಮುಖ ಸುದ್ದಿ

ತಾಳ್ಮೆ ವಹಿಸಿ!: ಜಾರಕಿಹೊಳಿ ಸಹೋದರರಿಗೆ ವಿದೇಶದಿಂದ ಸಿದ್ದರಾಮಯ್ಯ ಸಂದೇಶ

ಬೆಳಗಾವಿ (ಸೆ.12): ತಾವು ವಿದೇಶಗಳ ಪ್ರವಾಸದಲ್ಲಿರುವಾಗ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಕುರಿತು ಮಾಹಿತಿ ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿದೇಶದಿಂದಲೇ ಜಾರಕಿಹೊಳಿ ಸಹೋದರರಿಗೆ ತಾಳ್ಮೆಯಿಂದಿರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರ ಬಳಿ ಖುದ್ದು ಫೋನಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ಹೇಳಿದ್ದಾರೆ. ಯುರೋಪ್ ಪ್ರವಾಸದಲ್ಲಿರುವ ಸಮಯದಲ್ಲಿ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಗೆದ್ದು, ಜಾರಕಿಹೊಳಿ ಸಹೋದರರಿಗೆ ಮುಖಭಂಗವಾದ ನಂತರ ಕರ್ನಾಟಕ ರಾಜಕೀಯದ ಕಿಚ್ಚಿಗೆ ತುಪ್ಪ ಸುರಿದಂತಾಗಿದೆ.

ಸಿದ್ದರಾಮಯ್ಯ ಅವರ ಬೆಂಬಲಿಗರಾದ ಜಾರಕಿಹೊಳಿ ಸಹೋದರರಿಗೆ ವಿದೇಶದಿಂದಲೇ ತಾಳ್ಮೆಯ ಪಾಠ ಮಾಡಿರುವ ಸಿದ್ದರಾಮಯ್ಯ ಅವರು, ವಿದೇಶದಿಂದ ಬಂದ ಬಳಿಕ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಅಲ್ಲಿಯವರೆಗೂ ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಮುಜುಗರವಾಗುವಂಥ ಯಾವುದೇ ಹೆಜ್ಜೆ ಇಡುವುದು ಬೇಡ ಎಂದು ಸಲಹೆ ಮಾಡಿಡಿದ್ದಾರೆ ಎಂದು ತಿಳಿದುಬಂದಿದೆ.

ತಾಳ್ಮೆಯ ಸಂದೇಶ ನೀಡಿದ್ದರೂ ಸಹ ಸಿದ್ದರಾಮಯ್ಯ ಅವರು ಸೆ.16 ರಂದು ವಿದೇಶದಿಂದ ವಾಪಸ್ ಆಗಲಿದ್ದು, ಅಷ್ಟರಲ್ಲಿ ರಾಜ್ಯ ರಾಜಕಾರಣದಲ್ಲಿ ಏನೆಲ್ಲ ಬದಲಾವಣೆಯಾಗುತ್ತದೋ ಎಂಬ ಕುತೂಹಲವಂತೂ ಇದ್ದೇ ಇದೆ. (ಎನ್.ಬಿ)

Leave a Reply

comments

Related Articles

error: