ಮೈಸೂರು

ಕಾವ್ಯ ಬೆಂಕಿಯಾಗದೇ ಬೆಳಕಾಗಿರಲಿ: ಸಾಹಿತಿ ಡಾ. ಸಿಪಿಕೆ ಸಲಹೆ

ಕೃತಿ ಲೋಕಾರ್ಪಣೆ, ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ – ಈ ಮೂರು ಕಾರ್ಯಕ್ರಮಗಳ ಸಮ್ಮಿಲನವನ್ನು ‘ಕಾವ್ಯ ಸಂಕಿರಣ’ ಎಂದು ಹೇಳಿದರೆ ತಪ್ಪಾಗಲಾರದು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ದೀಪ್ತಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಶನಿವಾರ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ದೀಪ್ತಿ ಕೀರ್ತಿ ಶಿಖರ’ ಪ್ರಶಸ್ತಿ ಪ್ರದಾನ, ‘ಹನಿಹಳ್ಳ’ ‘ಕ್ಷಮಿಸು ಹೆಣ್ಣೆ ಕ್ಷಮಿಸು’ ಕೃತಿಗಳ ಲೋಕಾರ್ಪಣೆ ಹಾಗೂ ‘ವರ್ಷಾಂತ್ಯದಲ್ಲಿ ಹೊಸ ವರ್ಷದ ಮುನ್ನೋಟ’ ಕವಿಗೋಷ್ಠಿ ಕಾರ್ಯಕ್ರಮವನ್ನು ಡಾ.ಸಿ.ಪಿ.ಕೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಸಾಂಸ್ಕೃತಿಕ ಉತ್ಸವ ಎಂದು ಕರೆಯಬಹುದಾಗಿದೆ. ಕಾರಣ ಈ ಸುಂದರ ಕ್ಷಣವನ್ನು ಆಯೋಜಿಸಿರುವ ಸಂಸ್ಥೆ ದೀಪ್ತಿ ಸಾಂಸ್ಕೃತಿಕ ವೇದಿಕೆ. ಇಲ್ಲಿ ಮಾಧುರ್ಯ ಮತ್ತು ದೀಪ್ತಿ ಒಟ್ಟಾಗಿ ಸಂಸ್ಕೃತಿಯಾಗಿದೆ.  ಸಂಸ್ಕೃತಿಯ ಅನಾವರಣವಾಗಿದೆ. ಸಂಸ್ಕೃತಿ ಎಂದರೆ ಕೃಷಿ. ಎಲ್ಲರಿಗೂ ಸವಿಯ ಬೆಳಕಿನ ಔತಣ ಬಡಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾವ್ಯ ಮತ್ತು ಕಾರ್ಯ ರೂಪಗಳಲ್ಲಿ ಬೇರೆಯಾಗಿರಬಹುದು ಆದರೆ ಸ್ವರೂಪದಲ್ಲಿ ಒಂದೇ, ಇವೆರಡರ ನಡುವೆ ವ್ಯತ್ಯಾಸವಿಲ್ಲ. ಇವೆರಡಕ್ಕೂ ಮೂಲ ಕಾವು. ಆದರೆ ಈ ಕಾವು ಬೆಂಕಿಯಾಗಬಾರದು, ಬೆಳಕಾಗಿರಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಧಕರಿಗೆ ‘ದೀಪ್ತಿ ಕೀರ್ತಿಶಿಖರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರು ಡಾ.ಸಿ.ಪಿ.ಕೆ ಅವರ ‘ಹನಿಹಳ್ಳ’ ಮತ್ತು  ‘ಕ್ಷಮಿಸು ಹೆಣ್ಣೆ ಕ್ಷಮಿಸು’ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾಸ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಡಿ.ತಿಮ್ಮಯ್ಯ ವಹಿಸಿದ್ದರು. ಸಾಹಿತಿ ರಂಗನಾಥ ಮೈಸೂರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಂಗಕರ್ಮಿ ಹಾಗೂ ಸಾಹಿತಿ ನಾ.ನಾಗಚಂದ್ರ, ದೀಪ್ತಿ ಸಾಂಸ್ಕೃತಿಕ ವೇದಿಕೆಯ ಅಧ‍್ಯಕ್ಷ ಕಾಳಿಹುಂಡಿ ಶಿವಕುಮಾರ್ ಉಪಸ‍್ಥಿತರಿದ್ದರು.

Leave a Reply

comments

Related Articles

error: