ಪ್ರಮುಖ ಸುದ್ದಿ

ಬೆಲೆ ಏರಿಕೆ ನಿಯಂತ್ರಣಕ್ಕೆ ಆಗ್ರಹ : ಮಡಿಕೇರಿಯಲ್ಲಿ ಎಸ್‍ಡಿಪಿಐ ಪ್ರತಿಭಟನೆ

ರಾಜ್ಯ(ಮಡಿಕೇರಿ) ಸೆ.12 :- ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಇಂದಿರಾಗಾಂಧಿ ವೃತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.  ಈ ಸಂದರ್ಭ ಮಾತನಾಡಿದ ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕರ್, ತೈಲೋತ್ಪನ್ನಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದ್ದು, ಕೇಂದ್ರ ಸರಕಾರ ಜನಸಾಮಾನ್ಯರ ಸಂಕಷ್ಟದ ಬದುಕಿನ ಮೇಲೆ ಮತ್ತೆ ಬರೆ ಎಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನಸಾಮಾನ್ಯರ ಹಿತಕ್ಕೆ ವಿರುದ್ಧವಾಗಿ ಕೇಂದ್ರ ಸರಕಾರ ಆರ್ಥಿಕ ನೀತಿಗಳನ್ನು ಜಾರಿಗೆ ತಂದಾಗಲೆಲ್ಲಾ ಪ್ರತಿಭಟನೆಗಳು ನಡೆದಿವೆ. ಆದರೆ ಯಾವುದೇ ಹೋರಾಟಗಳಿಗೆ ಸ್ಪಂದನೆ ದೊರೆಯುತ್ತಿಲ್ಲ. ಎನ್‍ಡಿಎ ನೇತೃತ್ವದ ಕೇಂದ್ರ ಸರಕಾರ ಬಂಡವಾಳಶಾಹಿಗಳ ಪರವಾಗಿದೆ ಹೊರತು ಜನಸಾಮಾನ್ಯರ ಪರವಾಗಿಲ್ಲವೆಂದು ಆರೋಪಿಸಿದರು.

ತಕ್ಷಣ ಸರಕಾರ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಅಬ್ದುಲ್ ಅಡ್ಕರ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಸ್‍ಡಿಪಿಐ ನಗರಾಧ್ಯಕ್ಷ ಖಲೀಲ್ ಪಾಷಾ, ಆಟೋ ಯೂನಿಯನ್ ಅಧ್ಯಕ್ಷ ಅರ್ಶಿದ್, ನಗರಸಭಾ ಸದಸ್ಯರಾದ ಮನ್ಸೂರ್ ಆಲಿ, ಪೀಟರ್ ಮತ್ತಿತರರು ಪಾಲ್ಗೊಂಡಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: