ಕರ್ನಾಟಕಮೈಸೂರುಸಿಟಿ ವಿಶೇಷ

ರಾಷ್ಟ್ರ ಮಟ್ಟದಲ್ಲಿ ಐಕಾನ್ ಆಗ ಹೊರಟಿದೆ ಭಜರಂಗಿ ಸ್ಟಿಕ್ಕರ್; ರೂವಾರಿ ಕಲಾವಿದ ಕರಣ್ ಆಚಾರ್ಯ ಜೊತೆ ಚುಟುಕು ಸಂವಾದ

img-20160910-wa0030

ಕಳೆದ ನಾಲ್ಕು ದಿನಗಳ ಹಿಂದೆ ಹೀಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಕಾರೊಂದು ಭರ್ರನೆ ಪಾಸಾಯಿತು. ಆ ಕಾರಿನ ಹಿಂದುಗಡೆ ಇದ್ದ ಸ್ಟಿಕ್ಕರೊಂದರ ಮೇಲೆ ನನ್ನ ಕಣ್ಣು ಹರಿದಾಡಿತು. ಅಷ್ಟೇ ಅಲ್ಲ ವಾವ್ಹ್ ಅನ್ನುವ ಉದ್ಘಾರವೊಂದು ನನಗರಿವಿಲ್ಲದೇ ಹೊರಳಿತ್ತು. ಇದಕ್ಕೆಲ್ಲ ಕಾರಣ ಎಲ್ಲರೂ ಇಷ್ಟಪಡುವ ಅರ್ಧ ಮುಖದ ಭಜರಂಗಿ ಸ್ಟಿಕ್ಕರ್.

img-20160910-wa0013

ಅದು ಅಂತಿಂಥ ಸ್ಟಿಕ್ಕರ್ ಅಲ್ಲ ರಾಷ್ಟ್ರಮಟ್ಟದಲ್ಲಿ ಐಕಾನ್ ಆಗ ಹೊರಟಂತಿದೆ. ಕಾರು, ಬಸ್, ಬೈಕ್, ಲಾರಿ, ಅಂಗಡಿ-ಮುಂಗಟ್ಟುಗಳು ಯಾವುದನ್ನೂ ಈ ಸ್ಟಿಕ್ಕರ್ ಬಿಟ್ಟಿಲ್ಲ. ಅದಕ್ಕಿಂತಲೂ ಕೆಲವರ ವಾಟ್ಸಾಪ್ ಡಿಪಿಯಲ್ಲಿಯೂ ಈ ಭಜರಂಗಿ ಕಾಣಿಸಿಕೊಳ್ಳತೊಡಗಿದ್ದಾನೆ ಅಂದರೆ ಅದು ಯಾವ ರೀತಿ ಯುವ ಜನತೆಯಲ್ಲಿ ಕ್ರೇಜ್ ಹುಟ್ಟಿಸಿದೆ ಎನ್ನುವುದನ್ನು ತಿಳಿಯುವುದು ಕಷ್ಟವೇನಲ್ಲ.

ಮೈಸೂರು ಮಾತ್ರವಲ್ಲದೇ ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳಲ್ಲಿ ಅಷ್ಟೇ ಅಲ್ಲ ಬೇರೆ, ಬೇರೆ ರಾಜ್ಯಗಳಿಗೂ ಇದು ಹರಡಿದೆ.

ಅವರಾರೆಂದು ತಿಳಿಯುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಸರಗೋಡು ಮೂಲದ ಕರಣ್ ಆಚಾರ್ಯ ಈ ಸ್ಟಿಕ್ಕರ್ ನಿರ್ಮಾಣದ ರೂವಾರಿ. ಬಾಲ್ಯದಲ್ಲಿಯೇ ಕಲಾಭಿರುಚಿಯನ್ನು ಹೊಂದಿದ ಇವರು ಕಲೆಯಲ್ಲಿಯೇ ಏನನ್ನಾದರೂ ಸಾಧಿಸಬೇಕೆಂದು ಹೊರಟವರು. ಆದರೆ ಅವರ ಈ ಅರ್ಧ ಮುಖದ ಹನುಮಂತ ಚಿತ್ರ ಜನರಲ್ಲಿ ಇಷ್ಟೊಂದು ಕ್ರೇಜ್ ಹುಟ್ಟಿಸಬಹುದೆಂಬುದನ್ನು ಅವರು ಕನಸು ಮನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ.

‘ಸಿಟಿಟುಡೆ’ ಪ್ರತಿನಿಧಿಯಾಗಿ ಇಂದು ಅವರೊಂದಿಗೆ ಮಾತನಾಡುವ ಅವಕಾಶ ಲಭಿಸಿತ್ತು.

* ನಿಮಗೆ ಈ ಭಜರಂಗಿ ಚಿತ್ರವನ್ನೇ ಮಾಡಬೇಕು ಅಂತ ಅನಿಸಿದ್ದಕ್ಕೆ ಸ್ಫೂರ್ತಿ?

ಕಾಸರಗೋಡಿನ ಕುಂಬ್ಳೆ ಪ್ರದೇಶದ ಹಿಂದೂ ಯುವಕರು ಕಳೆದ ವರ್ಷ ಗಣೇಶೋತ್ಸವ ಆಚರಣೆ ವೇಳೆ ನನಗೆ ಏನಾದರೂ ವಿಭಿನ್ನ ಲಾಂಛನ ಸಿದ್ಧಪಡಿಸಿಕೊಡಿ, ಶಿವನನ್ನು ಸಿದ್ಧಪಡಿಸಿಕೊಟ್ಟರೂ ಆಗಬಹುದು ಎಂದರು. ಆದರೆ ಆಗ ನನ್ನ ತಲೆಗೆ ಹೊಳೆದದ್ದು ಭಜರಂಗಿ. ಮೊದಲು ಮುಖದ ಸ್ಟಿಕರ್ ಮಾತ್ರ ಮಾಡಿದ್ದೆ, ನಂತರ ಪೂರ್ಣರೂಪ. ಅದು ಇಷ್ಟೊಂದು ಕ್ರೇಜ್ ಹುಟ್ಟಿಸುತ್ತದೆ ಎಂದುಕೊಂಡಿರಲಿಲ್ಲ. ಈ ಸ್ಟಿಕರ್ ಮಾಡಿ ಈಗ ಸರಿಯಾಗಿ ಒಂದು ವರ್ಷವಾಯಿತು. ಅದೀಗ ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಿದೆ. ತುಂಬಾ ಖುಷಿ ಆಗ್ತಾ ಇದೆ.

* ಎಲ್ಲೆಲ್ಲಿ ವರ್ಕ್ ಮಾಡಿದ್ದೀರಿ?

ಡ್ರಾಯಿಂಗ್ ಟೀಚರ್ ಆಗಿ ಕಾಸರಗೋಡಿನ ಖಾಸಗಿ ಇಂಗ್ಲೀಷ್ ಮಾಧ್ಯಮ ಶಾಲೆಯೊಂದರಲ್ಲಿ, ಹಾಗೂ ಮಂಗಳೂರು ಇನ್‍ಫೋಟೆಕ್ ಕಂಪನಿಯಲ್ಲಿ.

* ಯಾವ ಸ್ಕೂಲ್ ಆಫ್ ಆರ್ಟ್‍ನಲ್ಲಿ ಕಲಿತದ್ದು..?

ಕಾಸರಗೋಡಿನ ರಿದಂ ಸ್ಕೂಲ್ ಆಫ್ ಆರ್ಟ್. ಕೇರಳದ ತ್ರಿಶೂರ್ ನಲ್ಲಿ ಆನಿಮೇಷನ್ ಕಲ್ತಿದ್ದೇನೆ.

img-20160910-wa0005

* ಎಲ್ಲಿಯಾದರೂ ಪ್ರದರ್ಶನ ನೀಡಿದ್ದೀರಾ..?

ಬೆಂಗಳೂರಿನ ಚಿತ್ರಸಂತೆಯಲ್ಲಿ ಮತ್ತು ಮಂಗಳೂರಿನ ಕುಡ್ಲ ಕಲಾಮೇಳದಲ್ಲಿ ಪಾಲ್ಗೊಂಡು ಕ್ಯಾರಿಕೇಚರ್ ಮಾಡ್ತಾ ಇದ್ದೆ.

* ಯಾವುದಾದರೂ ಕಾರ್ಟೂನ್ ನೆಟ್ ವರ್ಕ್ನಲ್ಲಿ ಕೆಲಸ..?

ಹಾಂ. ಎಪಿಸೋಡ್‍ವೈಸ್ ಅಲ್ಲಿ ಬರ್ತಾ ಇದೆ ಅಂತಷ್ಟೇ ಹೇಳಬಹುದು.

* ಇನ್ನೂ ಏನಾದರೂ ಮಾಡುವ ಆಸೆ…?

ಪೇಟಿಂಗ್ ಮಾಡುವಾಸೆ. ಮುಂದೆ ಡಿಎಫ್ಎಕ್ಸ್ ಕಲಿಯಬೇಕು.

* ಮುಂದಿನ ಚಿತ್ರ ಯಾವುದನ್ನು ಮಾಡ್ಬೇಕಂತಿದ್ದೀರಿ..?

ನರಸಿಂಹ ಮಾಡ್ಬೇಕೂಂತ ಇದೆ. ಆದ್ರೆ ಫೇಸ್‍ಬುಕ್ ಫ್ರೆಂಡ್ಸ್, ವಾಟ್ಸಾಪ್ ಫ್ರೆಂಡ್ಸ್ ಎಲ್ಲ ಶಿವನನ್ನು ಮಾಡಿ, ವಿವೇಕಾನಂದರನ್ನು ಮಾಡಿ ಅಂತ ಅವರೇ ಸಲಹೆ ಕೊಡ್ತಾರೆ ಎನ್ನುತ್ತಾರೆ ಕರಣ್.

ಸದ್ಯಕ್ಕೆ ಅವರ ಭಜರಂಗಿ, ಐಕಾನ್ ಆಗಿ ಸುದ್ದಿ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಅವರ ಕಲೆಗೆ ಚಿಕ್ಕಂದಿನಿಂದಲೇ ನೀರೆರೆಯುತ್ತಿರುವುದು ಅವರ ತಾಯಿ.

ಹಿಂದುತ್ವವನ್ನು ನರನಾಡಿಗಳಲ್ಲಿ ಪ್ರವಹಿಸುವಂತೆ ಪ್ರೇರೇಪಿಸುತ್ತಿರುವ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಹನುಮಾನ್ ಸ್ಟಿಕ್ಕರ್ ಎಲ್ಲೆಡೆ ಸಂಚಲನ ಮೂಡಿಸಿದೆ.

img-20160910-wa0022

ಅವರು ಅವರ ಕಲೆಗಳು ನಿಜಕ್ಕೂ ಅಭೂತಪೂರ್ವ. ಈಗಷ್ಟೇ ಎಲ್ಲರ ಮನಗೆಲ್ಲುತ್ತಿರುವ ಅವರ ಕಲೆ ಪ್ರಪಂಚದಾದ್ಯಂತ ಹರಡಿ ಎಲ್ಲ ರೀತಿಯಿಂದಲೂ ಪ್ರೋತ್ಸಾಹ ಸಿಗಲಿ. ಮರೆಯಿಂದ ಸರಿದು ತೆರೆಯ ಮೇಲೆ ಬರಲಿ. ಕರಣ್ ಆಚಾರ್ಯ ಹೆಸರು ಜನಜನಿತವಾಗಲಿ ಎಂಬುದೇ ನಮ್ಮ ಆಶಯ.

– ಸುಹಾಸಿನಿ ಹೆಗಡೆ

Leave a Reply

comments

Related Articles

error: