
ಪ್ರಮುಖ ಸುದ್ದಿ
ರಸ್ತೆ ಕಾಮಗಾರಿ ಕಳಪೆ : ಗ್ರಾಮಸ್ಥರ ಪ್ರತಿಭಟನೆ
ರಾಜ್ಯ(ಚಾಮರಾಜನಗರ)ಸೆ.14:- ರಸ್ತೆ ಕಾಮಗಾರಿ ಕಳಪೆಯಾಗಿದೆಯೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ಮಾಡಿದ್ದಾರೆ.
ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ರೇಷ್ಮೆ ಇಲಾಖಾ ಕಛೇರಿಯ ಮುಂಭಾಗದಿಂದ ತೊರವಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ 1 ಕೋಟಿ 20 ಲಕ್ಷ ರೂ ಅನುದಾನದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಮೊದಲಿಗೆ ಸಿಸಿ ಚರಂಡಿಗಳನ್ನು ನಿರ್ಮಾಣ ಮಾಡಿದ್ದ ಗುತ್ತಿಗೆದಾರನ ಕಾರ್ಯದಿಂದ ಇದೀಗಲೇ ಮೇಲಿನ ಗಾರೆ ಉದುರುತ್ತಿದೆ. ರಸ್ತೆಗೆ ಮೊದಲು ಮೆಟ್ಲಿಂಗ್ ಮಾಡದೆ ಡಾಂಬರ್ ಹಾಕುವ ಕಾಮಗಾರಿ ಪ್ರಾರಂಭವಾಗಿ ಒಂದು ವಾರವೂ ಕೂಡಾ ಆಗಿಲ್ಲ ಡಾಂಬರ್ ಕಿತ್ತು ಬರುತ್ತಿದೆ. ಇಂತಹ ಕಾಮಗಾರಿಯ ವೇಳೆ ಅಧಿಕಾರಿಗಳು ಸ್ಥಳದಲ್ಲಿ ನಿಂತು ಕೆಲಸ ನಿರ್ವಹಿಸಿಲ್ಲ. ಬದಲಿಗೆ ಗುತ್ತಿಗೆದಾರ ತನಗಿಷ್ಟ ಬಂದಂತೆ ಕಾಮಗಾರಿ ಮಾಡುತ್ತಿದ್ದುದನ್ನು ಗಮನಿಸಿದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಇದಕ್ಕೂ ಕ್ಯಾರೆ ಎನ್ನದ ಗುತ್ತಿಗೆದಾರನ ವಿರುದ್ಧ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗರಾಜಮ್ಮ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿಯನ್ನು ತಡೆದು ಪಿಡಬ್ಲ್ಯೂಡಿ ಎಸ್.ಇ ಗೆ ಕರೆಸಿ ಸ್ಥಳದಲ್ಲೇ ಗುಣಮಟ್ಟವನ್ನು ಪರಿಶೀಲಿಸಿದರು.
ಕಾಮಗಾರಿಯು ಕಳಪೆ ಗುಣಮಟ್ಟದ್ದು ಎಂದು ರುಜುವಾತಾದ್ದರಿಂದ ಗುತ್ತಿಗೆ ಕೆಲಸಕ್ಕೆ ತಡೆ ನೀಡಿ ಗುತ್ತಿಗೆದಾರನಿಗೆ ನೋಟೀಸ್ ನೀಡಲಾಯಿತು. (ಕೆ.ಎಸ್,ಎಸ್.ಎಚ್)