ಮೈಸೂರು

ಕಾವಲು ರಹಿತ ಕ್ರಾಸಿಂಗ್ ಮಾಡುವ ಸಲುವಾಗಿ ಮುಖ್ಯರಸ್ತೆ ಬಂದ್ : ಗ್ರಾಮದ ಸಂಪರ್ಕವನ್ನೇ ನಿಷ್ಕ್ರಿಯಗೊಳಿಸುವ ಅವೈಜ್ಞಾನಿಕ ನಿರ್ಧಾರಕ್ಕೆ ಗ್ರಾಮಸ್ಥರಿಂದ ಆಕ್ಷೇಪ

ಮೈಸೂರು,ಸೆ.14:- ನಂಜನಗೂಡು ತಾಲೂಕಿನ ಕೋಡಿ ನರಸೀಪುರ ಗ್ರಾಮದ ಬಳಿ ಕಾವಲು ರಹಿತ ಕ್ರಾಸಿಂಗ್ ಮಾಡುವ ಸಲುವಾಗಿ ಮುಖ್ಯರಸ್ತೆಯನ್ನು ಬಂದ್ ಮಾಡಿ ಗ್ರಾಮದ ಸಂಪರ್ಕವನ್ನೇ ನಿಷ್ಕ್ರಿಯಗೊಳಿಸುವ ಅವೈಜ್ಞಾನಿಕ ನಿರ್ಧಾರಕ್ಕೆ ಮುಂದಾಗಿರುವ ರೈಲ್ವೆ ಇಲಾಖೆಯ ನಡೆಗೆ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಗಿದೆ.

ಸುಮಾರು 50 ದಲಿತ ಕುಟುಂಬಗಳಿರುವ ಈ ಪುಟ್ಟ ಗ್ರಾಮದಲ್ಲಿ ಮುಖ್ಯರಸ್ತೆಯ ಮಧ್ಯೆ ಚಾಮರಾಜನಗರ-ಮೈಸೂರು ರೈಲ್ವೆ ಮಾರ್ಗ ಹಾದುಹೋಗಿದ್ದು, ಜನೋಪಯೋಗಿಯಾಗಿರುವ ಮುಖ್ಯರಸ್ತೆಯನ್ನು ಬಂದ್ ಮಾಡಿ ರೈಲ್ವೆ ಇಲಾಖೆಗೆ ಅನುಕೂಲವಾಗಿ ಗ್ರಾಮಸ್ಥರಿಗೆ ಮಾರಕವಾಗಲಿರುವ  ಮತ್ತೊಂದು ಮಾರ್ಗದಲ್ಲಿ ಗ್ರಾಮ ಸಂಪರ್ಕ ಹೊಂದುವಂತೆ ಹೇರಿಕೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇಲಾಖೆಯು ಸೆ.14ರಂದು ಮುಖ್ಯರಸ್ತೆ ಬಂದ್ ಮಾಡುವುದಾಗಿ ನಾಮಫಲಕ ಅಳವಡಿಸಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಒಂದು ವೇಳೆ ರಸ್ತೆ ಸಂಪರ್ಕ ಕಡಿತಗೊಳಿಸಲು ಮುಂದಾದರೆ ಖಂಡಿಸಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಲಿಂಕ್ ಮಾಡುವ ಹುನ್ನಾರದಿಂದಾಗಿ ಬಹಳ ಅಪಾಯಕಾರಿ ಯಾದ ಕಬಿನಿ ಬಲದಂಡೆ ನಾಲೆಯ ಏರಿ ಮೇಲೆ ವಾಹನ ಸಂಚಾರವಿಲ್ಲದಿದ್ದರೂ ರೈಲ್ವೆ ಗೇಟ್ ನೌಕರರನ್ನು ನಿಯೋಜಿಸಿ ವೃಥಾ ವ್ಯಯವಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ನಾಲೆ ಏರಿ ಹಾಗೂ ಚಾಮರಾಜನಗರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲು ಸಮೀಪದಲ್ಲೇ ಮೇಲ್ಸೇತುವೆ ನಿರ್ಮಿಸಿ ಕಾಲುದಾರಿ ಮಾಡಲಾಗಿದೆ. ಇದೇ ಸೇತುವೆ ಮಾರ್ಗವನ್ನು ಗ್ರಾಮದ ಮುಖ್ಯರಸ್ತೆಯನ್ನಾಗಿ ಲಿಂಕ್ ಮಾಡುವ ಇಲಾಖೆಯ ದುರುದ್ದೇಶ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಗ್ರಾಮದಿಂದ ಚಾಮರಾಜನಗರ ಮುಖ್ಯರಸ್ತೆಗೆ ಕೇವಲ 0.73 ಕಿ.ಮೀ. ಅಂತರವಿದೆ. ರೈಲ್ವೆ ಇಲಾಖೆಯು ಉದ್ದೇಶಿಸಿರುವ ಗ್ರಾಮ ಸಂಪರ್ಕ ರಸ್ತೆಯು ಸುಮಾರು 3 ಕಿ.ಮೀ. ದೂರ ಆಗಲಿದ್ದು ಕೊಂಕಣ ಸುತ್ತಿ ಮೈಲಾರಕ್ಕೆ ಬರುವಂತಾಗಲಿದೆ.

ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರವಿದ್ದು, ನಂತರದ ವಿದ್ಯಾಭ್ಯಾಸಕ್ಕೆ ಸಮೀಪದ ಮಹದೇವನಗರಕ್ಕೆ ಹೋಗಬೇಕಿದೆ. ಇದರಿಂದ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಒಟ್ಟಾರೆ ಗ್ರಾಮಕ್ಕೆ ಭಾರೀ ತೊಂದರೆ ಎದುರಾಗಲಿದೆ. ಜತೆಗೆ ಸಾವಿರಾರು ಎಕರೆ ಕೃಷಿ ಭೂಮಿಗೆ ತೆರಳುವ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹಿನ್ನಡೆಯಾಗಲಿದೆ. ಹೀಗಾಗಿ ಹಾಲಿ ಮುಖ್ಯರಸ್ತೆಯನ್ನು ಯಥಾಸ್ಥಿತಿ ಕಾಯ್ದಿರಿಸಬೇಕು. ಒಂದುವೇಳೆ ಮುಚ್ಚುವ ಹುನ್ನಾರ ನಡೆಸಿದರೆ ಉಗ್ರ ಹೋರಾಟ ಕೈಗೊಳ್ಳುವುದರ ಜತೆಗೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿ ರೈಲ್ವೆ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಗ್ರಾಮದ ಯಜಮಾನರಾದ ಸ್ವಾಮಿ, ಕೆ.ಎಂ.ರಾಮು, ಕಾಂತರಾಜು ಎಚ್ಚರಿಸಿದ್ದಾರೆ.

ರೈಲ್ವೆ ಅಧಿಕಾರಿಗಳ ಎಡವಟ್ಟಿನಿಂದಾಗಿ  ಕೋಡಿನರಸೀಪುರ ಗ್ರಾಮ ಸಂಪರ್ಕ ರಸ್ತೆಗೆ ಇದುವರೆಗೂ ರೈಲ್ವೆ ಗೇಟ್ ಮುಂಜೂರು ಮಾಡಿಲ್ಲ. ಗ್ರಾಮದ ಕೂಗಳತೆ ದೂರದಲ್ಲಿ ವಾಹನ ಸಂಚಾರ ಹಾಗೂ ಜನಸಂಪರ್ಕವಿಲ್ಲದ ಮೂರು ಕಡೆ ರೈಲ್ವೆ ಗೇಟ್ ನಿರ್ಮಿಸಿ ಅವೈಜ್ಞಾನಿಕತೆ ಮೆರೆದು ವಾಹನ ಓಡಾಟವೇ ಇಲ್ಲದ ಕಬಿನಿ ಬಲದಂಡೆ ನಾಲೆಯ ಏರಿ, ವಿದ್ಯಾಪೀಠ ಏರಿ ಹಾಗೂ ಗೋಳೂರು ಏರಿಯಲ್ಲಿ ಗೇಟ್ ನಿರ್ಮಿಸಿ ಸಿಬ್ಬಂದಿ ನಿಯೋಜಿಸಿ ನಾಲ್ಕಾರು  ಗ್ರಾಮಗಳಿಗೆ ಸಂಪರ್ಕವಿರುವ  ರಸ್ತೆಯಲ್ಲೇ ಗೇಟ್ ನಿರ್ಮಿಸದೆ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.

ರೈಲ್ವೆ ಇಲಾಖೆಯ ಸರ್ವೆ ಪ್ರಕಾರ ಮಹಿಳಾ ವಿದ್ಯಾಪೀಠ ಗೇಟ್‍ನಲ್ಲಿ ವಾರ್ಷಿಕ ಸರಾಸರಿ 264, ಗೋಳೂರು ಗೇಟ್‍ನಲ್ಲಿ 48 ವಾಹನ ಓಡಾಟವಿದೆ. ರೈಲ್ವೆ ಗೇಟ್ ಹೊಂದಿಲ್ಲದ ಗ್ರಾಮದ ಮುಖ್ಯರಸ್ತೆಯಲ್ಲಿ 2,742 ವಾಹನ ಸಂಚಾರವಿರುವುದಾಗಿ ಅಧಿಕಾರಿಗಳೇ ಫಲಕದಲ್ಲಿ ದಾಖಲಿಸಿದ್ದು, ಗೇಟ್ ನಿರ್ಮಿಸಲು ಆಸಕ್ತಿ ತೋರದೆ ಪ್ರಮುಖ ರಸ್ತೆಯನ್ನೇ ಇಲ್ಲವಾಗಿಸುವ ಅಧಿಕಾರಿಗಳ ನಡೆ ಕುರಿತು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: