ಪ್ರಮುಖ ಸುದ್ದಿಮೈಸೂರು

ದಸರಾ ಮಹೋತ್ಸವ 2018ರ ಹಿನ್ನೆಲೆ : ಪೋಸ್ಟರ್ ಬಿಡುಗಡೆ ; ಜೆಡಿಎಸ್ ಸಚಿವರ ವಿರುದ್ಧ ಕೈ ಸಚಿವರು ಗರಂ

ಸಿದ್ದರಾಮಯ್ಯನವರು ಬರಲಿ ಹೇಳುತ್ತೇನೆ ಅಂದ್ರು ಸಚಿವ ಪುಟ್ಟರಂಗಶೆಟ್ಟಿ

ಮೈಸೂರು,ಸೆ.14:- ದಸರಾ ಮಹೋತ್ಸವ 2018ರ ಹಿನ್ನೆಲೆಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗುತ್ತಿದೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದ್ದು, ದಸರಾ ಮಹೋತ್ಸವದ ವೆಬ್‌ಸೈಟ್ ನ್ನು ಲೋಕಾರ್ಪಣೆಗೊಳಿಸಲಾಯಿತು.  ಪೋಸ್ಟರ್ ಮತ್ತು  ವೆಬ್‌ಸೈಟ್ ನ್ನು ಸಚಿವರು ಬಿಡುಗಡೆಗೊಳಿದರು.

ಸಭೆ ಆರಂಭದಲ್ಲೇ ಸಚಿವ ಪುಟ್ಟರಂಗಶೆಟ್ಟಿ ಉಪಾಧ್ಯಕ್ಷ ಸ್ಥಾನ ನೀಡುವಂತೆ ಬೇಡಿಕೆಯಿಟ್ಟರು. ಚಾಮರಾಜನಗರ ಜಿಲ್ಲೆಯ ಸಚಿವರನ್ನು ದಸರಾ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರನ್ನಾಗಿ ಮಾಡಿ. ಇಲ್ಲವಾದರೆ ನಮ್ಮನ್ನು ಸಭೆಗೆ ಯಾಕೆ ಕರೆಯುತ್ತೀರಿ ಎಂದು ಅಸಮಾಧಾನ ಹೊರಹಾಕಿದರು. ಕಾರ್ಯಕಾರಿ ಸಮಿತಿಗೆ ಸೇರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸಚಿವ ಜಿ.ಟಿ.ದೇವೇಗೌಡ ಸೂಚಿಸಿದರು.

ದಸರಾ ಮಹೋತ್ಸವ ಪ್ರಾರಂಭದಲ್ಲೇ ಅಸಮಾಧಾನ ಹೊಗೆ ಭುಗಿಲೆದ್ದಿದ್ದು, ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲವೆಂದು ಮತ್ತೊಮ್ಮೆ ಸಾಬೀತಾಯಿತು. ದಸರಾ ಕಾರ್ಯಕಾರಿ ಸಮಿತಿ ಸಭೆಯಿಂದ ಸಚಿವ ಪುಟ್ಟರಂಗ ಶೆಟ್ಟಿ ಹೊರ ನಡೆದಿದ್ದು, ನನ್ನನ್ನು ಕಡೆಗಣಿಸಲಾಗುತ್ತಿದೆ. ಸಚಿವ ಜಿಟಿದೇವೇಗೌಡರನ್ನು ಬಿಟ್ಟರೆ ನಾನೇ ಸೀನಿಯರ್. ಶಿಷ್ಟಾಚಾರ ಉಲ್ಲಂಘನೆಯಾಗಿದೆ ನಾನೇಕೆ ಸಭೆಯಲ್ಲಿರಬೇಕು. ಪೋಸ್ಟರ್ ನಲ್ಲಿ ಸಚಿವ ಜಿ.ಟಿ.ದೇವೇಗೌಡ, ಸಾರಾ ಮಹೇಶ್, ಸಚಿವೆ ಜಯಮಾಲಾ ಫೋಟೋಗಳಿವೆ ನನ್ನ ಪೋಟೋ ಇಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು  ಬರಲಿ ಹೇಳುತ್ತೇನೆ. ಇವತ್ತು ಸಂಜೆವರೆಗೂ ಟೈಂ ಕೊಟ್ಟಿದ್ದೇನೆ. ಸರಿಮಾಡಿಕೊಳ್ಳದಿದ್ದರೆ ನಮಗೆ ತುಂಬಾನೆ ಅವಮಾನವಾಗುತ್ತದೆ ಎಂದು ಜೆಡಿಎಸ್ ಸಚಿವರ ವಿರುದ್ಧ ಕೈ ಸಚಿವರು ಗರಂ ಆಗಿದ್ದಾರೆ. ಈಗ ಆಗಿರೋ ಅವಮಾನದ ಬಗ್ಗೆ ಸಮನ್ವಯ ಸಮಿತಿಯಲ್ಲಿ ಮಾತಾಡುತ್ತೇನೆ ಎಂದಿದ್ದಾರೆ.

ದಸರಾ  ಕಾರ್ಯಕಾರಿ ಸಮಿತಿ ಸಭೆಯಿಂದ ಕಾಂಗ್ರೆಸ್ ಶಾಸಕರು ದೂರವೇ ಉಳಿದಿದ್ದು, ಸಭೆಗೆ ಹಾಜರಾಗಿದ್ದ ಪುಟ್ಟರಂಗ ಶೆಟ್ಟಿ ಕೂಡ ಅರ್ಧದಲ್ಲೇ ಸಭೆಯಿಂದ ಹೊರಕ್ಕೆ ನಡೆದರು. ಮಾಜಿ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ಅನಿಲ್  ಚಿಕ್ಕಮಾದು ಕೂಡ ಸಭೆಯಿಂದ ದೂರವೇ ಉಳಿದಿದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ಶಾಸಕರು ಗೈರಾಗಿದ್ದು, ಕೈ ಶಾಸಕರ ನಡೆ ಗೊಂದಲಕ್ಕೆ ಕಾರಣವಾಗಿದೆ. ಸಚಿವ ಸಾ.ರಾ.ಮಹೇಶ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಮಹದೇವು ಪಾಲ್ಗೊಂಡಿದ್ದಾರೆ.  ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಾಗಿದ್ದಾರೆ. (ಕೆ.ಎಸ್,ಎಸ್.ಎಚ್).

 

Leave a Reply

comments

Related Articles

error: