
ಮೈಸೂರು
ದಸರಾಗೆ 25 ಕೋಟಿ ರೂ.ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಸಚಿವ ಜಿ.ಟಿ.ದೇವೇಗೌಡ
ಮೈಸೂರು,ಸೆ.14:- ವಿಶ್ವವಿಖ್ಯಾತ ನಾಡಹಬ್ಬ ದಸರಾ 2018ಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಭೆ ನಡೆದಿದ್ದು, ಕೈ ಸಚಿವರ ಅಸಮಾಧಾನಗಳ ನಡುವೆಯೇ ದಸರಾ ಕಾರ್ಯಕಾರಿ ಸಮಿತಿ ಸಭೆ ಮುಕ್ತಾಯಗೊಂಡಿದೆ.
ಬಳಿಕ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ ಅವರು ಪಾರಂಪರಿಕ ದಸರಾಗೆ ಹೆಚ್ಚು ಹೊತ್ತು ನೀಡಲು ಕಾರ್ಯಕಾರಿ ಸಭೆ ನಡೆಸಲಾಗಿದೆ ಎಂದರು. ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಕಾರ್ಯಕಾರಿ ಸಮಿತಿಗೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುವ ವಿಚಾರಕ್ಕೆ ಕಾರ್ಯಕಾರಿ ಸಮಿತಿ ಅಧ್ಯಕ್ಷ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿ 3 ಮಂದಿ ಸಚಿವರನ್ನು ದಸರಾ ಕಾರ್ಯಕಾರಿಣಿಗೆ ಉಪಧ್ಯಾಕ್ಷರಾಗಿ ನೇಮಿಸಲು ನಿರ್ಣಯ ಕೈಗೊಳ್ಳಲಾಗಿದೆ . ಸಚಿವರಾದ ಪುಟ್ಟರಂಗಶೆಟ್ಟಿ, ಸಾ.ರಾ. ಮಹೇಶ್, ಎನ್ ಮಹೇಶ್ ಅವರನ್ನು ನೇಮಿಸಲು ನಿರ್ಧರಿಸಲಾಗಿದೆ ಎಂದರು. ಕಳೆದ ಬಾರಿ 15ಕೋಟಿ ನೀಡಿದ್ದರು. ಅವೆಲ್ಲ ಖರ್ಚಾಗಿದೆ. ಈ ಬಾರಿ ದಸರಾಗೆ 25 ಕೋಟಿ ರೂ.ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಗರ ರಸ್ತೆಗಳ ಅಭಿವೃದ್ಧಿ, ಪಾರ್ಕ್ ಗಳ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ ಕುರಿತಂತೆ ನಗರಾಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಸೇರಿದಂತೆ ಹಲವು ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯೊಳಗೆ ಬರುವ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಿವೆ ಎಂದು ತಿಳಿಸಿದರು.
ದಸರಾಗೆ ಜಂಬೂ ಸವಾರಿ ರಿಹರ್ಸಲ್ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿ ಕೇವಲ ಒಂದೇ ದಿನ ದಸರಾ ಮೆರವಣಿಗೆ ನಡೆಯಲಿದ್ದು, ಜಂಬೂ ಸವಾರಿ ರಿಹರ್ಸಲ್ ನಡೆಸಲ್ಲ. ಯಾವುದೇ ರಿಹರ್ಸಲ್ ಇರುವುದಿಲ್ಲ. ಜಂಬೂ ಸವಾರಿ ಜೊತೆ ಸಿಲೆಕ್ಟೆಡ್ ಕಲಾವಿದರ ತಂಡ ಮಾತ್ರ ಪಾಲ್ಗೊಳ್ಳಲಿರುವುದರಿಂದ ಬೇರೆ ಕಲಾವಿದರು ಪಾಲ್ಗೊಳ್ಳಲು ಅವಕಾಶವಿರಲ್ಲ. ಅದಕ್ಕಾಗಿ ಒಂದು ದಿನ ಗಜೆಪಡೆಗಳು ಸರಳವಾಗಿ ನಡೆದುಹೋಗುವಾಗ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಾಗದ ಕಲಾವಿದರು ಪಾಲ್ಗೊಂಡು ಕಲಾಪ್ರದರ್ಶನವನ್ನು ನೀಡಬಹುದು. ಒಂದು ಭಾನುವಾರ ಅವರಿಗಾಗಿಯೇ ಅವಕಾಶ ಕಲ್ಪಿಸಲಾಗಿದೆ ಎಂದರು. ಇದೇ ತಿಂಗಳ 20 ರ ಒಳಗಾಗಿ ದಸರಾ ಉಪ ಸಮಿತಿ ನೇಮಕ ಮಾಡಲಾಗುತ್ತಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಂದ ತಲಾ 5 ಮಂದಿ ಜನಪ್ರತಿನಿಧಿಗಳು ಉಪ ಸಮಿತಿಯಲ್ಲಿರಲಿದ್ದಾರೆ. ದಸರಾ ರೂಪುರೇಷೆ ಬಗ್ಗೆ ಇದೇ ತಿಂಗಳ 26 ಕ್ಕೆ ಸಂಪೂರ್ಣ ಮಾಹಿತಿ ಕೊಡುತ್ತೇವೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ ಈ ಬಾರಿ ದಸರಾ ಗೆ ಬೈಕ್ ರ್ಯಾಲಿ, ಮತ್ಸ್ಯ ಪ್ರದರ್ಶನ, ಏರ್ ಶೋ, ಲಲಿತ ಮಹಲ್, ಟೌನ್ ಹಾಲ್ ನಲ್ಲಿ ಮೈಸೂರು ಇತಿಹಾಸ ಸಾರುವ ಚಿತ್ರ ಪ್ರದರ್ಶನವಿರಲಿದೆ. ಲಂಡನ್, ಪ್ಯಾರಿಸ್, ಇಂಟರ್ ನ್ಯಾಶನಲ್ ಏರ್ ಪೋರ್ಟ್ ಗಳಲ್ಲಿಯೂ ಕೂಡ ದಸರಾ ಪ್ರಚಾರಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಸಚಿವ ಎನ್.ಮಹೇಶ್, ಶಾಸಕರುಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)