ದೇಶ

ಇಸ್ರೋ ಬೇಹುಗಾರಿಕೆ ಪ್ರಕರಣ: ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಗೆ 50 ಲಕ್ಷ ರೂ. ಪರಿಹಾರ ನೀಡಿ: ಸುಪ್ರೀಂ

ನವದೆಹಲಿ,ಸೆ.14-ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಬಂಧಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಕೇರಳ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಕೇರಳ ಪೊಲೀಸರು ನಂಬಿ ನಾರಾಯಣನ್ ಅವರನ್ನು ಸುಖಾಸುಮ್ಮನೆ ಬಂಧಿಸಿ ತೊಂದರೆ ಕೊಟ್ಟಿದ್ದಾರೆ ಎಂದು ಕಿಡಿಕಾರಿರುವ ಸುಪ್ರೀಂ ನಾರಾಯಣನ್ ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಬೇಹುಗಾರಿಕೆ ಆರೋಪ ಹೊರಿಸಿ ತನ್ನನ್ನು ಬಂಧಿಸಿದ್ದ ಕೇರಳ ಪೊಲೀಸರು ತನಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ನಾರಾಯಣನ್ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ 50 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಅಲ್ಲದೆ, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಡಿ.ಕೆ. ಜೈನ್ ನೇತೃತ್ವದ ಸಾಂವಿಧಾನಿಕ ಸಮಿತಿಯನ್ನೂ ರಚಿಸಲು ನ್ಯಾಯಾಲಯ ಆದೇಶಿಸಿದೆಯಲ್ಲದೆ ನಾರಾಯಣನ್ ಅವರ ವಿರುದ್ಧ ಸುಳ್ಳು ಆರೋಪ ಹೊರಿಸಿದ ಹಿಂದೆ ಪೊಲೀಸರ ಪಾತ್ರವನ್ನು ಪರಿಶೀಲಿಸಲು ಸೂಚಿಸಿದೆ.

ತನ್ನನ್ನು ಬಂಧಿಸಿದ್ದ ಕೇರಳ ಪೊಲೀಸರ ವಿರುದ್ಧ ಕ್ರಿಮಿನಲ್ ಮತ್ತು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ನಂಬಿ ನಾರಾಯಣನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ತಮ್ಮಿಂದ ಮಾಹಿತಿ ಹೊರ ಹಾಕುವ ಸಲುವಾಗಿ ಪೊಲೀಸರು ಹಾಗೂ ಗುಪ್ತಚರ ಬ್ಯುರೋ ಅಧಿಕಾರಿಗಳು ತಮಗೆ ಹಿಂಸೆ ನೀಡಿದ್ದರು ಎಂದು ಮಾಜಿ ವಿಜ್ಞಾನಿ ಆರೋಪಿಸಿದ್ದರು.

ನಾರಾಯಣನ್ ಅವರ ಅಪೀಲನ್ನು ಕೇರಳ ಹೈಕೋರ್ಟಿನ ವಿಭಾಗೀಯ ಪೀಠ ತಿರಸ್ಕರಿಸಿದ ನಂತರ ಅವರು ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು. ಈ ಪ್ರಕರಣದ ಮರು ತನಿಖೆಗೆ ಕೇರಳ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ 1998ರಲ್ಲಿಯೇ ತಡೆ ಹೇರಿತ್ತಲ್ಲದೆ ಅವರಿಗೆ 1 ಲಕ್ಷ ರೂ. ಪರಿಹಾರ ಪಾವತಿಸುವಂತೆಯೂ ತಿಳಿಸಿತ್ತು. ಮುಂದೆ ನಾರಾಯಣನ್ ಅವರು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಮೊರೆ ಹೋದಾಗ ಅವರ ಪರವಾಗಿ ಮಾರ್ಚ್ 2001ರಲ್ಲಿ ಹೊರಬಿದ್ದ ತೀರ್ಪಿನಲ್ಲಿ 10 ಲಕ್ಷ ರೂ. ಪರಿಹಾರ ಪಾವತಿಸುವಂತೆ ಆದೇಶಿಸಲಾಗಿತ್ತು. ಕೇರಳ ಸರ್ಕಾರ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರೂ ವಿಫಲವಾಗಿತ್ತು.

ಮಾಲ್ದೀವ್ಸ್ ದೇಶದ ಗುಪ್ತಚರ ಅಧಿಕಾರಿಗಳಿಗೆ ದೇಶದ ಪ್ರಮುಖ ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡಿದ ಆರೋಪವನ್ನು ಹೊರಿಸಿ 24 ವರ್ಷಗಳ ಹಿಂದೆ ಅಂದರೆ 1994, ನವೆಂಬರ್‌ 30ರಂದು ನಾರಾಯಣನ್ ಅವರನ್ನು ಬಂಧಿಸಿದ್ದರು.

ಈ ರಹಸ್ಯ ಮಾಹಿತಿಗಳು ರಾಕೆಟ್ ಮತ್ತು ಉಪಗ್ರಹ ಉಡಾವಣೆ ಕುರಿತಂತೆ ಫ್ಲೈಟ್ ಟೆಸ್ಟ್ ಡಾಟಾಗೆ ಸಂಬಂಧಿಸಿದ್ದಾಗಿತ್ತು ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದರು. ಲಕ್ಷಗಟ್ಟಲೆ ಹಣಕ್ಕಾಗಿ ಇಸ್ರೋ ರಹಸ್ಯಗಳನ್ನು ಮಾರಾಟ ಮಾಡಿದ ಆರೋಪವನ್ನು ಹೊತ್ತ ಇಬ್ಬರು ವಿಜ್ಞಾನಿಗಳಲ್ಲಿ ನಂಬಿ ನಾರಾಯಣನ್ ಒಬ್ಬರಾಗಿದ್ದರು. (ಎಂ.ಎನ್)

Leave a Reply

comments

Related Articles

error: