
ಮೈಸೂರು
ಮಕ್ಕಳಲ್ಲಿನ ಪ್ರತಿಭಾಶಕ್ತಿ ಪೋಷಿಸುವ ಲೇಖನ ಪ್ರಕಟವಾಗಲಿ: ಡಾ.ಎಲ್.ಹನುಮಂತಯ್ಯ
ಮಕ್ಕಳಲ್ಲಿರುವ ಪ್ರತಿಭಾ ಶಕ್ತಿಯನ್ನು ಪೋಷಿಸುವ ಲೇಖನಗಳು ಪ್ರಕಟವಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಚಿಂತಕ ಡಾ.ಎಲ್.ಹನುಮಂತಯ್ಯ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಲೇಖಕ ಡಾ.ಯಲ್ಲಪ್ಪ ಕೆಕೆಪುರ ಅವರು ಬರೆದಿರುವ 101 ಜಂತರ್ ಮಂತರ್ ಎಂಬ ವೈಚಾರಿಕ ಕೃತಿಯನ್ನು ಡಾ.ಎಲ್.ಹನುಮಂತಯ್ಯ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಮಕ್ಕಳ ಕುರಿತು ಸಾಹಿತ್ಯ ರಚಿಸುವುದು ಸುಲಭದ ಮಾತಲ್ಲ. ಸುಲಭವೆಂದುಕೊಂಡಿದ್ದರೆ ಅವರ ಗ್ರಹಿಕೆ ತಪ್ಪು ಎಂದರು. ಅವರಲ್ಲಿರುವ ಕುತೂಹಲವನ್ನು ಯಾವ ರೀತಿ ತಣಿಸಬೇಕು. ಯಾವ ರೀತಿ ಆಶ್ಚರ್ಯಗಳನ್ನು ಲೇಖನದಲ್ಲಿ ಪ್ರಸ್ತಾಪಿಸಬೇಕು ಎನ್ನುವುದು ಸುಲಭದ ಮಾತಲ್ಲ.
101 ಜಂತರ್ ಮಂತರ್ ಪುಸ್ತಕದಲ್ಲಿ 2500 ವರ್ಷಗಳ ಹಿಂದಿನ ಬುದ್ಧನ ಕಥೆಯಿಂದ ಮೊದಲ್ಗೊಂಡು ಪ್ರಧಾನಿ ನರೇಂದ್ರ ಮೋದಿಯವರೆಗಿನ ವಿಷಯಗಳನ್ನು ವಿಸ್ತಾರವಾಗಿ ಮಕ್ಕಳ ಮುಂದೆ ತೆರೆದಿಟ್ಟಿದ್ದಾರೆ ಎಂದರು. ಸಮಾಜಕ್ಕೇನು ನೀಡಬೇಕು ಎನ್ನುವವುದನ್ನು ಲೇಖಕ ಯೋಚಿಸಬೇಕು. ಆ ಕೆಲಸವನ್ನು ಯಲ್ಲಪ್ಪ ಮಾಡಿದ್ದಾರೆ. ಈ ಕೃತಿ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ ದೊಡ್ಡವರು ಓದಿ ತಿಳಿಯಬೇಕಾದ ಸಾಕಷ್ಟು ವೈಶಿಷ್ಯತೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಚಂದ್ರಶೇಖರ್, ಗೌರವ ಕೋಶಾಧ್ಯಕ್ಷ ರಾಜಶೇಖರ್ ಕದಂಬ, ಕಸಾಪ ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.