ಪ್ರಮುಖ ಸುದ್ದಿ

ರಾಜಕಾರಣಿಗಳು-ಅಧಿಕಾರಿಗಳ ವಾಹನ ಬಳಕೆಯಿಂದ ಸರ್ಕಾರಕ್ಕಾಗುತ್ತಿರುವ ನಷ್ಟ ತಪ್ಪಿಸಿ : ವಾಹನ ಚಾಲಕರ ಒಕ್ಕೂಟ ಆಗ್ರಹ

ರಾಜ್ಯ(ಬೆಂಗಳೂರು)ಸೆ.14:-  ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಾಹನ ಬಳಕೆಯಿಂದ ಸರ್ಕಾರದ ಬೊಕ್ಕಸಕ್ಕಾಗುತ್ತಿರುವ ಕೋಟ್ಯಾಂತರ ರೂ.ಗಳ ನಷ್ಟ ತಡೆಗೆ ಮುಖ್ಯಮಂತ್ರಿಗಳು ತುರ್ತು ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಸ್ವಾಮ್ಯ ಸಂಘ ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟ ಆಗ್ರಹಿಸಿದೆ.

ರಾಜ್ಯ ಸರ್ಕಾರದಲ್ಲಿ ಅಂದಾಜು 1.20 ಲಕ್ಷ ವಾಹನಗಳನ್ನು ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳು ಬಳಸುತ್ತಿದ್ದಾರೆ. ಪ್ರತಿ ವಾಹನಕ್ಕೆ ಪ್ರತಿ ದಿನ ಅಂದಾಜು ಇಂಧನಕ್ಕಾಗಿ ಒಂದು ಸಾವಿರ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ವಾರ್ಷಿಕ 3.60 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ತೀವ್ರ ನಷ್ಟ ಉಂಟುಮಾಡುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಎಂ.ಎನ್. ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜಕಾರಣಿಗಳು ಮತ್ತು ಅಧಿಕಾರಿಗಳು ಈ ವಾಹನಗಳನ್ನು ಶೇ. 75ರಷ್ಟು ಸ್ವಂತ ಕೆಲಸಗಳಿಗೆ ಬಳಸಿ ಉಳಿದ ಶೇ. 25ರಷ್ಟನ್ನು ಮಾತ್ರ ಸರ್ಕಾರದ ಕೆಲಸಕ್ಕೆ ಬಳಸುತ್ತಿದ್ದಾರೆ. ಯಾವುದೇ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುವ ವೇಳೆ ಅಧಿಕಾರಿಗಳಿಗೆ ವಾಹನ ಒದಗಿಸುವ ಷರತ್ತನ್ನು ಒಪ್ಪಿಕೊಂಡಿರುವುದಿಲ್ಲ ಎಂದ ಅವರು, ಈ ವಾಹನ ಚಾಲಕರನ್ನು ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಿಯಮ ಉಲ್ಲಂಘಿಸಿ ಬಳಸಿಕೊಳ್ಳಲಾಗುತ್ತಿದೆ. ಕಳೆದ 18 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಚಾಲಕರಿಗೆ ನಿಯಮಾನುಸಾರ ವೇತನ ಪಾವತಿಸುತ್ತಿಲ್ಲ ಎಂದು ಆರೋಪಿಸಿದರು.

ಸರ್ಕಾರದ ವಾಹನಗಳೊಂದಿಗೆ ಖಾಸಗಿ ವಾಹನಗಳನ್ನು ಬಾಡಿಗೆ ಪಡೆದು ಮಾಸಿಕ 50ರಿಂದ 60 ಸಾವಿರ ಬಾಡಿಗೆ ಪಾವತಿಸಲಾಗುತ್ತಿದೆ. ಚಾಲಕರಿಗೂ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.

ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಚಾಲಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸುವುದರಿಂದ ಅನಗತ್ಯ ವಾಹನಗಳ ಬಳಕೆಗೆ ಕ‌ಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: