ಮೈಸೂರು

ಗ್ರಾಹಕರ ದಿನಾಚರಣೆ: ವ್ಯಾಪಾರ ನಡೆಸಿ ಗಮನ ಸೆಳೆದ ವಿದ್ಯಾರ್ಥಿಗಳು

grahaka-dinacharane-1-webಮೈಸೂರು ಜಿಲ್ಲಾಡಳಿತ, ಆಹಾರ, ನಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಮೈಸೂರು ಜಿಲ್ಲಾ ಪಂಚಾಯತ್ ಅಧ‍್ಯಕ್ಷೆ ನಯೀಮಾ ಸುಲ್ತಾನಾ ನಜೀರ್ ಅಹಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಜಾಗರೂಕರಾಗಿರಬೇಕು ಮತ್ತು  ರಶೀದಿಯನ್ನು ಪಡೆಯಬೇಕು. ಇದು ಗ್ರಾಹಕರ ಹಕ್ಕು. ಕಲಬೆರಕೆ ಪದಾರ್ಥಗಳನ್ನು ಕೊಂಡು ಮೋಸ ಹೋಗಬೇಡಿ. ಒಂದು ವೇಳೆ ಮೋಸ ಹೋದಲ್ಲಿ ಜಿಲ್ಲಾ ಗ್ರಾಹಕರ ಮಾಹಿತಿ ಹಕ್ಕು ಕೇಂದ್ರಕ್ಕೆ ದೂರು ನೀಡಿ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ವಾಸು ಮಾತನಾಡಿ 1986 ರಿಂದ ಗ್ರಾಹಕ ಹಕ್ಕು ಕಾಯ್ದೆ ಜಾರಿಗೆ ಬಂದಿತು. ಆದರೆ ಇಂದು ಗ್ರಾಹಕ ಸೇವೆ ಸಮರ್ಪಕವಾಗಿ ಸಿಗುತ್ತಿದೆಯೇ ಎಂದು ವಿಚಾರ ಮಾಡಬೇಕಿದೆ. ಗ್ರಾಹಕರಿಗೆ ತಮ್ಮ ಗ್ರಾಹಕ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಗ್ರಾಹಕ ಎಂದಾಕ್ಷಣ ಕೇವಲ ದಿನಸಿ ಅಂಗಡಿಗೆ ಹೋಗಿ ದಿನಸಿ ವಸ್ತುಗಳನ್ನು ತರುವುದಲ್ಲ. ಆತನಿಗೆ ಆ ವಸ್ತುಗಳ ಬಗೆಗೆ ಸಂಪೂರ್ಣ ಮಾಹಿತಿ ಇರಬೇಕಾಗುತ್ತದೆ. ಮೆಡಿಕಲ್ ಸ್ಟೋರ್ ಗೆ ಹೋಗಿ ಔಷಧ ತರಬೇಕಾದರೆ ಆ ಔಷಧಿಯ ಗುಣಾವಗುಣಗಳ ಬಗ್ಗೆ ತಿಳಿಯುವಷ್ಟು ಸಾಮಾನ್ಯ ಜ್ಞಾನ ಗ್ರಾಹಕನಿಗಿರಬೇಕು ಎಂದು ಹೇಳಿದರು.

ಇಂದು ಎಲ್ಲಾ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುತ್ತಿದ್ದಾರೆ. ತೂಕ, ಅಳತೆ, ಪ್ರಮಾಣಗಳಲ್ಲಿ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಮಕ್ಕಳು ಚಿಕ್ಕಂದಿನಿಂದಲೇ ಇದರ ಬಗ್ಗೆ ತಿಳಿದುಕೊಂಡರೆ ಮೋಸ ಹೋಗದೆ ಜಾಗರೂಕತೆಯಿಂದ ವ್ಯವಹರಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಗ್ರಾಹಕ ಕಾಯ್ದೆ ಜಾರಿಗೆ ಬರುವ ಮುನ್ನ ಗ್ರಾಹಕರೇ ದೇವರು ಎಂಬ ಕಾಲವಿತ್ತು. ಆದರೆ ಇಂದು ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಕಾಯ್ದೆಗಳು ಹೆಚ್ಚಾದಂತೆ ತಪ್ಪುಗಳು ಹೆಚ್ಚಾಗಿ ಭ್ರಷ್ಟಾಚಾರಗಳು ನಡೆಯುತ್ತಿವೆ. ಆದ್ದರಿಂದ ಮೊದಲು ಜನಜಾಗೃತಿ ಆಗಬೇಕು. ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಮೋಸವನ್ನು ತಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಪ್ರಶ್ನಿಸುವ ಪ್ರವೃತ್ತಿಯನ್ನು ಅಳವಡಿಸಿಕೊಂಡರೆ ಉತ್ತಮ ಗ್ರಾಹಕರಾಗಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ 7 ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳೂ ಸಹ ಮಳಿಗೆಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗಿರುವುದು ಕಂಡು ಬಂತು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಕಾಳಮ್ಮ ಕೆಂಪರಾಮ್ಯ, ಉಪಾಧ್ಯಕ್ಷ ಎನ್.ಬಿ. ಮಂಜು, ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನ ಅಧ್ಯಕ್ಷ ಎಂ.ಚಿನ್ನಸ್ವಾಮಿ, ಕಾರ್ಯದರ್ಶಿ ಬಿ.ವಿ. ರವೀಂದ್ರನಾಥ್, ಸಾ.ಶಿ.ಇ. ಉಪನಿರ್ದೇಶಕ ಬಸಪ್ಪ, ಕಾರ್ಪೋರೇಟರ್ ಭಾಗ್ಯವತಿ ಸುಬ್ರಹ್ಮಣ್ಯ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ನಿರ್ವಾಹಕ ಸೂರ್ಯನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: