ಪ್ರಮುಖ ಸುದ್ದಿ

ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ 30.02ಲಕ್ಷ ರೂ. ಲಾಭ

ರಾಜ್ಯ(ಮಡಿಕೇರಿ) ಸೆ.14 :- ಕೊಡಗಿನ ಮೊಟ್ಟ ಮೊದಲ ಸಹಕಾರಿ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ, 2017-18ನೇ ಸಾಲಿನಲ್ಲಿ 30.02ಲಕ್ಷ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅವರು, ಪ್ರಸ್ತುತ ವರ್ಷ ಒಟ್ಟು 32.72 ಕೋಟಿ ರೂ.ಗಳಷ್ಟು ವ್ಯವಹಾರ ನಡೆಸಿದ್ದು, 2 ಕೊಟಿ ರೂ.ಗಳಿಗೂ ಅಧಿಕ ಷೇರು ಬಂಡವಾಳವಿದೆ ಎಂದರು. ಸುಮಾರು 7.59 ಕೋಟಿ ರೂ. ಸಾಲ ನೀಡಲಾಗಿದ್ದು, 10.88 ಕೋಟಿ ರೂ. ಠೇವಣಿ ಸಂಗ್ರಹಣೆಯಾಗಿದೆ. ಸ್ವಂತ ಬಂಡವಾಳದ ಮೇಲೆ ವ್ಯವಹಾರ ನಡೆಸುತ್ತಿರುವ ಬ್ಯಾಂಕ್ ಮಡಿಕೇರಿಯ ಬ್ರಾಹ್ಮಣರ ಕಲ್ಯಾಣ ಮಂಟಪದ ಬಳಿ 42 ಸೆಂಟ್ ಜಾಗದಲ್ಲಿ ಗುರುಸದನ ಕಟ್ಟಡವನ್ನು ಹೊಂದಿದೆ. ಬ್ಯಾಂಕ್‍ನ ಒಟ್ಟು ಆಸ್ತಿಯ ಮೌಲ್ಯ 15.75 ಕೋಟಿಯಷ್ಟಿದ್ದು, ಈ ಬಾರಿ 20 ಲಕ್ಷ ರೂ.ಗಳಿಗೂ ಅಧಿಕ ಪಾಲು ಬಂಡವಾಳ ಸಂಗ್ರಹಣೆಯಾಗಿದೆ. ಠೇವಣಿ ಸಂಗ್ರಹಣೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ 87 ಲಕ್ಷದಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದ ಕೆ.ಕೆ. ಮಂಜುನಾಥ್ ಕುಮಾರ್, ಈ ಬಾರಿ ಸದಸ್ಯರಿಗೆ ಶೇ.5 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು.

ಕಳೆದ ಬಾರಿ ಶೇ.3 ರಷ್ಟು ಡಿವಿಡೆಂಡ್ ನೀಡಲಾಗಿದ್ದು, ಬ್ಯಾಂಕ್‍ನ ಆರ್ಥಿಕ ವ್ಯವಹಾರ ಪ್ರಗತಿಯಲ್ಲಿರುವುದರಿಂದ ಶೇ.5ಕ್ಕೆ ಏರಿಕೆ ಮಾಡಿರುವುದಾಗಿ ತಿಳಿಸಿದರು. ಸೆಪ್ಟೆಂಬರ್ 16 ರಂದು ಬ್ಯಾಂಕ್‍ನ ವಾರ್ಷಿಕ ಮಹಾಸಭೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಫೀ.ಮಾ. ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಲಿದೆ.ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, 10ನೇ ತರಗತಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಹಿರಿಯ ಸದಸ್ಯರಿಗೆ ಸನ್ಮಾನ ಹಾಗೂ ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದೆಂದು ಮಂಜುನಾಥ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ರೇವತಿ ರಮೇಶ್, ನಿರ್ದೇಶಕರಾದ ಹೆಚ್.ಆರ್. ಮುತ್ತಪ್ಪ, ರವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಕೆ.ಎಸ್. ಮುತ್ತಮ್ಮ ಹಾಗೂ ಮುಖ್ಯ ಲೆಕ್ಕಾಧಿಕಾರಿ ಎಸ್.ಸಿ. ನಟೇಶ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: